ಬೆಂಗಳೂರು: ಜಿ.ಟಿ ಮಾಲ್‌ನಲ್ಲಿ ಪಂಚೆ ಧರಿಸಿದ್ದಕ್ಕೆ ರೈತನಿಗೆ ಮಾಲ್ ಪ್ರವೇಶ ನಿರಾಕರಣೆ ಮಾಡಿ ಅಪಮಾನ ಮಾಡಲಾಗಿತ್ತು. ಈ ಕುರಿತಂತೆ ಸ್ಪೀಕರ್ ಯು.ಟಿ ಖಾದರ್ ಅವರು ಸದನದಲ್ಲಿ ಪ್ರಸ್ತಾಪ ಮಾಡಿದರು. ಯುವಕನೋರ್ವ ಚೆನ್ನಾಗಿ ಒಳ್ಳೆಯ ಕೆಲಸ ಪಡೆದುಕೊಂಡಿದ್ದ, ಊರಿಂದ ತಂದೆ ಬಂದಾಗ ಅವರಿಗೆ ಸಿನಿಮಾ ತೋರಿಸಿ ಖುಷಿ ಪಡಿಸಬೇಕು ಎಂದಿಕೊಂಡಿದ್ದರು. ಆದರೆ ಯುವಕನ ತಂದೆ ಪಂಚೆ ಹಾಕಿದ್ದಾರೆ ಅಂತ ಒಳ ಪ್ರವೇಶಿಸಲು ಅನುಮತಿ ನೀಡಿಲ್ಲ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಒಂದು ವಾರ ಕಾಲ ಮಾಲ್ ಗೆ ಪವರ್ ಕಟ್….!?
ಈ ವೇಳೆ ಮಾತನಾಡಿದ ಮಾಜಿ ಸಚಿವ ಲಕ್ಷ್ಮಣ್ ಸವದಿ, ರೈತನಿಗೆ ಮಾಲ್ ಹೋದಾಗ ಈ ರೀತಿ ಅವಮಾನ ಆಗಿರೋದು ಬಹಳ ಗಂಭೀರ ವಿಚಾರ, ಮಾಲ್ ಅವನಿಗೆ ಶೂಟ್ ಹಾಕಿಕೊಂಡವರೇ ಬರಬೇಕು ಎಂದರೇ ಅಮೆರಿಕಗೆ ಹೋಗಿ ಮಾಲ್ ಕಟ್ಟಿಕೊಳ್ಳಲಿ ಎಂದು ಹೇಳಿದರು. ಅಲ್ಲದೇ, ಒಂದು ವಾರ ಕಾಲ ಮಾಲ್ ಗೆ ಪವರ್ ಕಟ್ ಮಾಡಬೇಕು ಎಂದು ಆಗ್ರಹಿಸಿದರು. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಜಿಟಿ ಮಾಲ್ ಮುಚ್ಚಲು ಆದೇಶ ಕೊಡಬೇಕು ಎಂದು ಆಗ್ರಹಿಸಿದರು.
ಮಾಲ್ ಮುಚ್ಚಿಸುತ್ತೇವೆ ಸಚಿವ ಬೈರತಿ ಸುರೇಶ್:
ಈ ಕುರಿತಂತೆ ಸದನಕ್ಕೆ ಉತ್ತರಿಸಿದ ಸಚಿವ ಬೈರತಿ ಸುರೇಶ್, ಜಿಟಿ ಮಾಲ್ ನಲ್ಲಿ ರೈತನ ಪ್ರವೇಶ ನಿರಾಕರಣೆ ಪ್ರಕರಣದಲ್ಲಿ ಕ್ರಮಕೈಗೊಳ್ಳಲು ಹಳೆ ಬಿಬಿಎಂಪಿ ಕಮಿಷನ್ ಬಳಿ ಪರಿಹಾರ ಕೇಳಿದ್ದೇನೆ. ಸರ್ಕಾರಕ್ಕೆ ಅಧಿಕಾರ ಇದೆ, 7 ದಿನಗಳ ಕಾಲ ಕಾನೂನು ಪ್ರಕಾರ ಮುಚ್ಚಿಸುವ ಅವಕಾಶ ಇದೆ. ಬೇಗ ಕ್ರಮ ಕೈಗೊಂಡು ಮಾಲ್ ಮುಚ್ಚಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಬಿಬಿಎಂಪಿ ಇಂದ ಕ್ರಮ : ಸದನದಲ್ಲಿ ಚರ್ಚೆ ಆಗುತ್ತಿದ್ದಂತೆ ಬಿಬಿಎಂಪಿ ಕೂಡ ಜಿಟಿ ಮಾಲ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಸರ್ಕಾರದ ಸೂಚನೆ ಮೇರೆಗೆ ಬಿಬಿಎಂಪಿ ಅಧಿಕಾರಿಗಳಿಂದ ಜಿಟಿ ಮಾಲ್ ಮೇಲೆ ಕ್ರಮಕೈಗೊಳ್ಳಲಿದ್ದು, ಕೆಲವೇ ಹೊತ್ತಲ್ಲಿ ಜಿ.ಟಿ. ಮಾಲ್ ಗೆ ಬಿಬಿಎಂಪಿ ವಲಯ ಆಯುಕ್ತರ ತಂಡ ಭೇಟಿ ನೀಡಲಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ಸೂಚನೆ ಮೇರೆಗೆ ಒಂದು ವಾರಗಳ ಕಾಲ ಮಾಲ್ ಲಾಕ್ ಮಾಡುವ ಸಾಧ್ಯತೆ ಇದೆ. ಶಾಸಕರ ಆಗ್ರಹದ ಹಿನ್ನೆಲೆ ಮಾಲ್ ಗೆ ಬೀಗ ಹಾಕಲು ಬಿಬಿಎಂಪಿ ಮುಂದಾಗಿದ್ದು, ಸದ್ಯ ಮಾಲ್ ಬಳಿ ಪೊಲೀಸರ ನಿಗಾ ವಹಿಸಿದ್ದಾರೆ. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಆಗಮಿಸಿ ಕ್ರಮಕೈಗೊಂಡಿದ್ದಾರೆ.