ಹೊಸದಿಲ್ಲಿ: ದೇಶದಲ್ಲಿ ಯಾವುದೇ ನಾಯಕನೂ ಸೂಪರ್ ಮ್ಯಾನ್ ನಂತಾಗಲು ಪ್ರಯತ್ನಿಸಬಾರದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಜಾರ್ಖಂಡ್ ನ ಗುಮ್ಲಾದಲ್ಲಿರುವ ವಿಕಾಸ್ ಭಾರತಿ ಎಂಬ ಸರ್ಕಾರೇತರ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಸ್ವಯಂ ಅಭಿವೃದ್ಧಿಯ ಹಂತದಲ್ಲಿ ಯಾವುದೇ ಮನುಷ್ಯ ತನ್ನಷ್ಟಕ್ಕೆ ತಾನು ಸೂಪರ್ ಮ್ಯಾನ್ ನಂತಾಗಲು ಪ್ರಯತ್ನಿಸಬಹುದು. ಆನಂತರ ದೇವರಾಗಲು ಅಥವಾ ಭಗವಂತನಾಗಲೂ ಪ್ರಯತ್ನಿಸಬಹುದು. ಕಟ್ಟಕಡೆಗೆ ತಾನೇ ಸ್ವಯಂಭು, ತಾನೇ ವಿಶ್ವರೂಪದ ಪ್ರತೀಕ ಎಂಬಂತಾಗಲು ಇನ್ನಿಲ್ಲದ ಕಸರತ್ತುಗಳನ್ನು ಮಾಡಬಹುದು. ಆದರೆ, ಮುಂದೇನಾಗುತ್ತದೆ ಎಂದು ಹೇಳಲಾಗದು’’ ಎಂದು ಹೇಳಿದ್ದಾರೆ.
“ಮುಂದೆ ಯಾವಾಗ ಏನಾಗುತ್ತೆ ಅಂತ ಹೇಳೋಕ್ಕಾಗಲ್ಲ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಎಚ್ಚರಿಕೆಯಿಂದ ಜೀವನ ಮಾಡಬೇಕಾಗುತ್ತದೆ. ಆತ್ಮೋನ್ನತಿ ಹಾಗೂ ವ್ಯಕ್ತಿತ್ವ ವಿಕಸನ ಎಂಬುದು ನಿರಂತರವಾಗಿ ನಡೆಯುವಂಥ ಪ್ರಕ್ರಿಯೆ. ಅದರಲ್ಲಿ ತೊಡಗಿಸಿಕೊಳ್ಳುವುದೆಂದರೆ ಅದು ಅಭಿವೃದ್ಧಿಯಲ್ಲಿ ನಿರಂತರವಾಗಿ, ದಣಿವಾಗದ ರೀತಿಯಲ್ಲಿ ಮುಂದುವರೆಯುವುದು ಎಂದರ್ಥ’’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಮೋಹನ್ ಭಾಗವತ್ ಅವರ ಸೂಪರ್ ಮ್ಯಾನ್ ಹೇಳಿಕೆಯು ಪ್ರಧಾನಿ ನರೇಂದ್ರ ಮೋದಿಯವರ ಮೇಲೆಯೇ ಪ್ರಯೋಗಿಸಿದುು ಎಂದು ಹಲವಾರು ಮಾಧ್ಯಮಗಳು ವರದಿಯಾಗಿದೆ. ಕಾಲಾನುಕ್ರಮದಲ್ಲಿ ಮೋದಿ ವಿರುದ್ಧ ಆಗಾಗ ಟೀಕೆ – ಟಿಪ್ಪಣಿಗಳನ್ನು ಮಾಡುವ, ಪುನಃ ಮೋದಿಯವರ ವಿರುದ್ಧ ತಮ್ಮ ಟೀಕಾಸ್ತ್ರ ಪ್ರಯೋಗಿಸಿದ್ದಾರೆ ಎಂದು ಅವು ಹೇಳಿವೆ.
ಮಾಧ್ಯಮಗಳ ಈ ರೀತಿಯ ವಿಶ್ಲೇಷಣೆಗೆ ಕಾರಣ ಇಲ್ಲವೆಂದೇನಿಲ್ಲ. ಈ ಹಿಂದೆಯೂ ಮೋಹನ್ ಭಾಗವತ್ ಅವರು, ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಕೆಲವೊಮ್ಮೆ ಪ್ರತ್ಯಕ್ಷವಾಗಿ, ಮತ್ತೂ ಕೆಲವೊಮ್ಮೆ ಪರೋಕ್ಷವಾಗಿ ಟೀಕಿಸುತ್ತಲೇ ಬಂದಿದ್ದಾರೆ.
2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಲೇ, ನಿಜವಾದ ಸೇವಕ ದುರಹಂಕಾರದ ವರ್ತನೆಯನ್ನು ಹೊಂದಿರಬಾರದು. ಹಾಗೊಮ್ಮೆ ಅಂಥ ದುರಹಂಕಾರದ ಭಾವನೆಗಳು ಬಂದರೂ ಅದನ್ನು ಸೂಕ್ಷ್ಮವಾಗಿ ನಿಭಾಯಿಸುವ ಜಾಣ್ಮೆಯನ್ನು ಕಲಿಯಬೇಕು’’ ಎಂದು ಹೇಳಿದ್ದರು.
ಸನಾತನ ಧರ್ಮದ ಸಾರದ ಕುರಿತು ಮಾತನಾಡಿದ ಅವರು, “ಸನಾತನ ಸಂಸ್ಕೃತಿ ಮತ್ತು ಧರ್ಮವು ರಾಜಮನೆತನದಿಂದ ಬಂದಿಲ್ಲ ಆದರೆ ಆಶ್ರಮಗಳು ಮತ್ತು ಕಾಡುಗಳಿಂದ ಬಂದಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಉಡುಪುಗಳು ಬದಲಾಗಬಹುದು, ಆದರೆ ನಮ್ಮ ಸ್ವಭಾವವು ಎಂದಿಗೂ ಬದಲಾಗುವುದಿಲ್ಲ ಎಂದಿದ್ದಾರೆ.
ಮಣಿಪುರದಲ್ಲಿ ಕಳೆದ ವರ್ಷ ನಿರಂತರವಾಗಿ ಗಲಭೆಗಳು ನಡೆದು ನೂರಾರು ಮಂದಿ ಸಾವಿಗೀಡಾದಾಗಲೂ ನಿರ್ಲಿಪ್ತವಾಗಿದ್ದ ಕೇಂದ್ರ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದ ಭಾಗವತ್, ದೇಶದ ಒಂದು ಭಾಗ ಹೊತ್ತಿ ಉರಿಯುತ್ತಿರುವಾಗ ಆಡಳಿತ ಗದ್ದುಗೆಯಲ್ಲಿ ಕುಳಿತವರು ಕೇವಲ ಚುನಾವಣೆಯ ಕಡೆಗೆ ಗಮನ ಹರಿಸುತ್ತಿದ್ದಾರೆ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ, ಮೊದಲು ಹೊತ್ತಿ ಉರಿಯುವ ಬೆಂಕಿಯನ್ನು ಆರಿಸಬೇಕು. ಅದನೇ ನಿಜವಾದ ದೇಶಸೇವಕರ ಕರ್ತವ್ಯ ಎಂದು ಹೇಳಿದ್ದರು.