ಉಪ್ಪಿನಂಗಡಿ: ಯುವತಿಯೋರ್ವಳು ಸ್ನಾನ ಮಾಡುವುದನ್ನು ಬಚ್ಚಲು ಮನೆಯ ಕೋಣೆಗೆ ಇಣುಕಿ ನೋಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಇಲ್ಲಿನ ಪೆರಿಯಡ್ಕ ನಿವಾಸಿ ಅಬ್ದುಲ್ ರಹಿಮಾನ್ (41) ಎಂಬಾತನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಪೆರಿಯಡ್ಕ ಪರಿಸರದಲ್ಲಿ ರಾತ್ರಿ ಮನೆಯೊಂದಕ್ಕೆ ನುಗ್ಗಿದ ಪ್ರಕರಣದಲ್ಲಿ ಕೂಡಾ ಈತನೇ ಆರೋಪಿ ಎಂಬುದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜು.21ರಂದು ರಾತ್ರಿ 9 ಗಂಟೆಯ ಸುಮಾರಿಗೆ ಪೆರಿಯಡ್ಕದ 22 ವರ್ಷದ ಯುವತಿಯೋರ್ವಳು ತನ್ನ ಓದು ಮುಗಿಸಿ ಸ್ನಾನ ಮಾಡಲೆಂದು ತನ್ನ ಮನೆಯ ಬಚ್ಚಲು ಕೋಣೆಗೆ ಹೋಗಿ ಸ್ನಾನ ಮಾಡುತ್ತಿದ್ದಾಗ ಬಚ್ಚಲು ಮನೆಯ ಕಿಟಕಿಯಿಂದ ಪೆರಿಯಡ್ಕದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿರುವ ಅಬ್ದುಲ್ ರಹಿಮಾನ್ ಇಣುಕಿ ನೋಡಿದ್ದ.
ಆಗ ಈ ಯುವತಿಯು ಬೊಬ್ಬೆ ಹೊಡೆದು, ತಾಯಿಯಲ್ಲಿ ಈ ವಿಚಾರ ತಿಳಿಸಿದ್ದಳು. ತಾಯಿಯು ಹೊರಗೆ ಟಾರ್ಚ್ ಲೈಟ್ ಹಾಕಿದಾಗ ತಾಯಿಯನ್ನು ನೋಡಿದ ಆರೋಪಿ ಅಬ್ದುಲ್ ರಹಿಮಾನ್ ಕಾಂಪೌಂಡ್ ಹಾರಿ ಅಲ್ಲಿಂದ ಓಡಿ ಹೋಗಿದ್ದು, ಬಳಿಕ ಇವರ ಮನೆಯ ಮುಂದಿನ ಗೇಟ್ ಮೂಲಕ ಮನೆಗೆ ಬಂದು ಮುಂಬಾಗಿಲು ಬಡಿಯುತ್ತಿದ್ದ.
ಕೂಡಲೇ ಈಕೆಯ ತಾಯಿ ತಮ್ಮ ನೆರೆಕರೆಯವನ್ನು ಕರೆದಿದ್ದು, ಆಗ ಏನು ಗೊತ್ತಿಲ್ಲದ ಸಭ್ಯಸ್ಥನಂತೆ ನಟಿಸಿ, ತಾನು ಇವರ ಸಹಾಯಕ್ಕೆ ಬಂದವನಂತೆ ನಟಿಸಿದ್ದ. ಬಳಿಕ ಈತನ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಆ ಪ್ರಕರಣದಲ್ಲಿ ಬಂಧಿತನಾದ ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಮನೆ ಮಂದಿ ಗಾಢ ನಿದ್ದೆಯಲ್ಲಿರುವ ರಾತ್ರಿ ಸಮಯದಲ್ಲಿ ಮನೆಯ ಹಿಂಬಾಗಿಲನ್ನು ಸ್ಕ್ರೂ ಡ್ರೈವರ್ ಮೂಲಕ ತೆರೆದು ಒಳಗೆ ನುಗ್ಗಿರುವ ಘಟನೆ ಪೆರಿಯಡ್ಕದ ಜನತಾ ಕಾಲನಿ ಪರಿಸರದ ಕೆಲವು ಮನೆಗಳಲ್ಲಿ ನಡೆದಿತ್ತು. ಮನೆಯವರು ಎಚ್ಚರಗೊಂಡು ಬೊಬ್ಬೆ ಹೊಡೆದಾಗ ವ್ಯಕ್ತಿಯೋರ್ವ ಅಲ್ಲಿಂದ ಓಡಿ ತಪ್ಪಿಸಿಕೊಳ್ಳುತ್ತಿದ್ದ. ಈ ಮನೆಗಳಲ್ಲಿ ಯಾವುದೇ ಕಳ್ಳತನಗಳು ನಡೆದಿರಲಿಲ್ಲ.
ಇದು ಕಾಮಾಂಧನೋರ್ವನ ಕೃತ್ಯ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು. ಈ ರೀತಿಯ ಎಲ್ಲಾ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರದಿದ್ದರೂ, ಒಂದು ಪ್ರಕರಣದಲ್ಲಿ ಮಾತ್ರ ಆ ಮನೆಯವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಇದರ ತನಿಖೆ ನಡೆಸುತ್ತಿದ್ದ ಪೊಲೀಸರು ಬಚ್ಚಲು ಕೋಣೆಗೆ ಇಣುಕಿ ನೋಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಅಬ್ದುಲ್ ರಹಿಮಾನ್‌ನನ್ನು ಈ ಪ್ರಕರಣದ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು, ಈ ಪ್ರಕರಣದಲ್ಲಿ ಕೂಡಾ ಈತನೇ ಆರೋಪಿ ಎಂಬುದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.