ಸುಬ್ರಹ್ಮಣ್ಯ: ಮಂಗಳೂರು-ಬೆಂಗಳೂರು ರೈಲು ಮಾರ್ಗದ ಹಾಸನ ಜಿಲ್ಲಾ ವ್ಯಾಪ್ತಿಯ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ಶುಕ್ರವಾರ ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿದ್ದು, ಶನಿವಾರವೂ ರೈಲ್ವೆ ಇಲಾಖೆ ಕುಸಿತಗೊಂಡ ಸ್ಥಳದಲ್ಲಿ ದುರಸ್ತಿ ಕಾರ್ಯ ಸಮರೋಪಾದಿಯಲ್ಲಿ ನಡೆಸಿದೆ. ಶನಿವಾರವೂ ಕೆಲರೈಲುಗಳು ಸ್ಥಗಿತಗೊಂಡಿದ್ದು, ಇನ್ನು ಕೆಲವೊಂದು ರೈಲುಗಳು ಪಥ ಬದಲಾಯಿಸಿವೆ. ಸೋಮವಾರ ಮತ್ತೆ ರೈಲು ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಘಟನೆ ನಡೆದ ತಕ್ಷಣ ರೈಲ್ವೆ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು, ಇಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ರಾತ್ರಿ ನಿರಂತರ ಮಳೆಯಾಗಿದ್ದು, ದುರಸ್ತಿಗೆ ಅಲ್ಪ ಹಿನ್ನಡೆಯಾಗಿತ್ತು. ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ ಕೆಳಭಾಗದಿಂದ ತಡೆಗೋಡೆ ಮಾದರಿ ನಿರ್ಮಿಸುವ ಕಾರ್ಯ ಭರದಿಂದ ನಡೆಯುತ್ತಿದೆ.