ಈ ಬಾರಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಪದಕದಾಟದಲ್ಲಿ ಹರಿಯಾಣದ ಮೂಲದ 22 ವರ್ಷದ ಶೂಟರ್ ಮನು ಭಾಕರ್ ಅವರು ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕಗಳ ಖಾತೆಯನ್ನು ತೆರೆದಿದೆ. ಮಹಿಳೆಯರ 10 ಮೀಟರ್ ಶೂಟಿಂಗ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಡುವ ಮೂಲಕ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ.
ಶನಿವಾರ (ಜು.27) ನಡೆದ ಅರ್ಹತಾ ಸುತ್ತಿನಲ್ಲಿ ಮನು ಭಾಕರ್ 27 ಇನ್ನರ್ ಸರ್ಕಲ್ 10s ಒಳಗೊಂಡಂತೆ 580 ಅಂಕಗಳೊಂದಿಗೆ 3ನೇ ಸ್ಥಾನವನ್ನು ಪಡೆದು ಫೈನಲ್ ಸುತ್ತಿಗೆ ಎಂಟ್ರಿ ಕೊಟ್ಟಿದ್ದರು. ಇಂದು ಮಧ್ಯಾಹ್ನ 3.30ಕ್ಕೆ ಚಟೌರೊಕ್ಸ್ ಶೂಟಿಂಗ್ ಸೆಂಟರ್ನಲ್ಲಿ ನಡೆದ ಅಂತಿಮ ಸುತ್ತಿನಲ್ಲಿ 3ನೇ ಸ್ಥಾನದೊಂದಿಗೆ ಕಂಚಿನ ಪದಕವನ್ನು ಗೆದ್ದು, ಇತಿಹಾಸ ಬರೆದಿದ್ದಾರೆ. ಪ್ರಸಕ್ತ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನು ಭಾಕರ್ ಭಾಜನರಾಗಿದ್ದಾರೆ.
ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮನು ಭಾಕರ್ಗೆ ದೇಶವ್ಯಾಪಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಅಭಿನಂದನೆ ತಿಳಿಸಿದ್ದಾರೆ. ಇದು ಐತಿಹಾಸಿಕ ಮೆಡಲ್. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಮಹಿಳೆ ನೀವಾಗಿದ್ದೀರಿ. ನಿಮಗೆ ಅಭಿನಂದನೆಗಳು. ಎಂತಹ ಅತ್ಯುತ್ತಮ ಸಾಧನೆ ಎಂದು ಅಭಿನಂದನೆ ಜತೆ ಶ್ಲಾಘನೆ ಕೂಡ ವ್ಯಕ್ತಪಡಿಸಿದ್ದಾರೆ.