ಬಾಂಗ್ಲಾದೇಶದ ಹಿಂದೂಗಳ ಮತ್ತು ದೇವಸ್ಥಾನಗಳ ರಕ್ಷಣೆಗಾಗಿ ಭಾರತ ಸರ್ಕಾರವು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಅವರು, ಬಾಂಗ್ಲಾದೇಶದಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು ಈಗ ಹಿಂದೂಗಳ ವಿರುದ್ಧ ಪ್ರಾರಂಭವಾಗಿವೆ. ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಗುರಿ ಮಾಡಲಾಗುತ್ತಿದ್ದು, ಅವರನ್ನು ಬಹಿರಂಗವಾಗಿ ಹತ್ಯೆ ಮಾಡುವುದು, ಹಿಂದೂಗಳ ಮನೆಯ ಮೇಲೆ ದಾಳಿ ಮಾಡುವುದು, ಹಿಂದೂಗಳ ಅಂಗಡಿಗಳನ್ನು ಲೂಟಿ ಮಾಡುವುದು, ಹಿಂದೂಗಳ ದೇವಸ್ಥಾನಗಳು ಧ್ವಂಸಗೊಳಿಸುವುದು, ಬೆಂಕಿ ಹಚ್ಚುವುದು, ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂದೂಗಳನ್ನು ಸ್ಥಳಾಂತರಿಸುವುದು ಮುಂತಾದ ದೌರ್ಜನ್ಯಗಳು ನಡೆಯುತ್ತಿವೆ. ಇದರಿಂದಾಗಿ ಅಲ್ಲಿಯ ಅಲ್ಪಸಂಖ್ಯಾತ ಹಿಂದೂಗಳಲ್ಲಿ ಭಯದ ವಾತಾವರಣ ಉದ್ಭವಿಸಿದೆ.
ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಸೈನ್ಯದಿಂದ ಹಿಂದೂಗಳ ರಕ್ಷಣೆ ಮಾಡುವುದೆಂದು ಆಶ್ವಾಸನೆ ನೀಡಿದ್ದರೂ ಭಾರತ ಸರ್ಕಾರವು ಅವರ ಮೇಲೆ ಅವಲಂಬಿಸಿರದೇ ಹಿಂದೂ ಜನಾಂಗ ಮತ್ತು ದೇವಸ್ಥಾನ ರಕ್ಷಣೆಗಾಗಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದೆ.
ಬಾಂಗ್ಲಾದೇಶದಲ್ಲಿನ ಹಿಂದೂಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಅವರಿಗೆ ತಕ್ಷಣ ರಕ್ಷಣೆ ನೀಡಬೇಕು. ಇಲ್ಲಿಯವರೆಗೆ ಅಲ್ಲಿಯ ಹಿಂದೂಗಳ ಜೀವ ಮತ್ತು ಸಂಪತ್ತಿಯ ಏನೆಲ್ಲಾ ಹಾನಿ ಉಂಟಾಗಿದೆ, ಅದಕ್ಕೆ ತಕ್ಷಣ ಪರಿಹಾರ ನೀಡಬೇಕು. ಭಾರತ ಸರ್ಕಾರವು ಈ ವಿಷಯ ತ್ವರಿತವಾಗಿ ವಿಶ್ವಸಂಸ್ಥೆಯಲ್ಲಿ ಮಂಡಿಸಿ ಬಾಂಗ್ಲಾದೇಶದಲ್ಲಿನ ವಿಶ್ವಸಂಸ್ಥೆಯ ಸಂಘಗಳ ಜತೆಗೆ ಶಿಷ್ಟ ಮಂಡಳಿಗೆ ಭೇಟಿ ನೀಡಲು ಆಗ್ರಹಿಸಬೇಕು.
ಬಾಂಗ್ಲಾದೇಶದಲ್ಲಿನ ಹಿಂಸಾಚಾರದಿಂದ ರೋಸಿ ಹಿಂದೂಸ್ಥಾನಕ್ಕೆ ಬಂದಿರುವ ಹಿಂದೂಗಳಿಗೆ ನಾಗರಿಕ ಸುಧಾರಣಾ ಕಾನೂನಿನ ಮೂಲಕ (ಸಿಎಎ) ಭಾರತ ಸರ್ಕಾರವು ಆಶ್ರಯ ನೀಡಬೇಕು ಹಾಗೂ ಈ ಹಿಂದೆ ಕೂಡ ಸುಮಾರು 5 ಕೋಟಿ ಬಾಂಗ್ಲಾದೇಶಿ ನುಸುಳುಕೋರರು ಭಾರತದಲ್ಲಿ ನುಸುಳಿದ್ದಾರೆ. ಈ ಘಟನೆಯ ನಂತರ ಅವರ ನುಸುಳುವಿಕೆ ಹೆಚ್ಚಾಗುವ ಸಾಧ್ಯತೆಯನ್ನು ಗಮನಿಸಿದರೆ ಭಾರತೀಯ ಗಡಿಯಲ್ಲಿ ಸರಿಯಾದ ಬಂದೋಬಸ್ತ್ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.