ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ಜಪ್ಪಿನಮೊಗರಿನಲ್ಲಿ ವಿಭಿನ್ನ ಪರಿಕಲ್ಪನೆಯ ಅಭಿಯಾನಕ್ಕೆ ಇಂದು ಚಾಲನೆ
ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ದೇಶದೆಲ್ಲೆಡೆ ಸಾರ್ಥಕಗೊಳಿಸುವಂತೆ ಪ್ರಧಾನಿ ಮೋದಿ ಅವರು ಈಗಾಗಲೇ ಕರೆ ನೀಡಿದ್ದಾರೆ. ಅದರಂತೆ ದಕ್ಷಿಣ ಕನ್ನಡ ಲೋಕಸಭಾ ವ್ಯಾಪ್ತಿಯ ಎಲ್ಲ ಪಿಎಂ ಆವಾಸ್ ಫಲಾನುಭವಿಗಳ ಯೋಜನೆ ಮನೆಗಳ ಮೇಲೂ ತ್ರಿವರ್ಣ ಧ್ವಜ ಹಾರಾಡಿಸುವ ವಿನೂತನ ಪ್ರಯತ್ನಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಮುಂದಾಗಿದ್ದಾರೆ.
ಮಂಗಳೂರಿನ ಜಪ್ಪಿನಮೊಗರಿನಲ್ಲಿರುವ ಶ್ರೀಮತಿ ವಿನಯಾ ಶ್ರೀನಿವಾಸ್ ಅವರ ಮನೆ ಮೇಲೆ ಮಂಗಳವಾರ ಬೆಳಗ್ಗೆ ಹರ್ ಘರ್ ಅಭಿಯಾನದಡಿ ತ್ರಿವರ್ಣ ಧ್ವಜ ಹಾರಾಡಿಸುವ ಮೂಲಕ ಈ ವಿನೂತನ ದೇಶಪ್ರೇಮ ಮೊಳಗಿಸುವ ಪ್ರಯತ್ನಕ್ಕೆ ಕ್ಯಾ. ಚೌಟ ಅವರು ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕ್ಷೇತ್ರದಲ್ಲಿರುವ ಎಲ್ಲ ಪಿಎಂ ಆವಾಸ್ ಗೃಹ ಫಲಾನುಭವಿಗಳನ್ನು ಭೇಟಿಯಾಗಿ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಾಡಿಸುವ ಮೂಲಕ ಈ ಬಾರಿಯ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಯಶಸ್ವಿಗೊಳಿಸುವುದಕ್ಕೆ ನಮ್ಮ ಜನಪ್ರತಿನಿಧಿಗಳು ಮುಂದಾಗುವಂತೆ ಕರೆ ನೀಡಿದ್ದಾರೆ.
ಹರ್ ಘರ್ ಅಭಿಯಾನದ ಪ್ರಯುಕ್ತ ನಮ್ಮ ಎಲ್ಲ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಜನಪ್ರತಿನಿಧಿಗಳು, ಮಹಾನಗರ ಪಾಲಿಕೆ ಸದಸ್ಯರು ಪಿಎಂ ಆವಾಜ್ ಯೋಜನೆ ಫಲಾನುಭವಿಗಳ ಮನೆಗಳಿಗೆ ಭೇಟಿ ಕೊಟ್ಟು ಹೆಚ್ಚಿನ ಸಂಖ್ಯೆ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡಿಸುವಂತೆ ಪ್ರೇರಣೆ, ಉತ್ತೇಜನ ನೀಡಬೇಕು. ಆ ಮೂಲಕ ಅವರೊಂದಿಗೆ ಪ್ರಧಾನಿ ಮೋದಿ ಅವರ ವಿಷನ್ ಹಂಚಿಕೊಳ್ಳುವಂತೆ ಸಂಸದರು ಮನವಿ ಮಾಡಿದ್ದಾರೆ. “ಪ್ರತಿಯೊಂದು ಪಿಎಂ ಅವಾಜ್ ಮನೆಯೂ ನಮ್ಮ ದೇಶದ ಬಡವರು, ಮಹಿಳೆಯರು ಮತ್ತು ಯುವಕರ ಬಗ್ಗೆ ನಮ್ಮ ಪ್ರಧಾನಿಯವರ ಕಾಳಜಿಯ ಸಂಕೇತವಾಗಿದೆ. ಹೀಗಿರುವಾಗ ಅಂತಹ ಮನೆಗಳ ಮೇಲೆ ನಮ್ಮ ತ್ರಿವರ್ಣ ಹಾರಿಸುವ ಮೂಲಕ ಅವರನ್ನು ರಾಷ್ಟ್ರೀಯತೆಯ ದಾರದಿಂದ ಒಗ್ಗೂಡಿಸುವ ಪ್ರಯತ್ನವಾಗಿದೆ” ಎಂದು ಅವರು ವಿವರಿಸಿದ್ದಾರೆ.
ತ್ರಿವರ್ಣ ದ್ವಜದ ಬಗ್ಗೆ ಹಾಗೂ ತಮ್ಮ ಸೇನಾ ಅನುಭವದ ಬಗ್ಗೆ ಮಾತನಾಡುತ್ತಾ, ” ನಮ್ಮ ದೇಶದ ಸೈನಿಕರ ಪಾಲಿಗೆ ತ್ರಿವರ್ಣ ದ್ವಜ ಎನ್ನುವುದು ಅವರ ಪಾಲಿನ ಉಸಿರು. ದೇಶದ ಪ್ರತೀಕವಾದ ದ್ವಜಕ್ಕಾಗಿಯೇ ಬದುಕುತ್ತಾನೆ ಮತ್ತು ಸಾಯುತ್ತಾನೆ. ಪ್ರತಿ ಸೈನಿಕನೂ ದೇಶಕ್ಕಾಗಿ ವೀರಮರಣವನ್ನಪ್ಪಿ ಧ್ವಜದಲ್ಲಿ ಸುತ್ತಿ ಮನೆಗೆ ಹಿಂದಿರುಗುವ ಕನಸು ಕಾಣುತ್ತಾನೆ. ಬದುಕಿರುವ ಪ್ರತಿ ಕ್ಷಣವೂ ತಿರಂಗವನ್ನು ಇನ್ನಷ್ಟು ಎತ್ತರದಲ್ಲಿ ಹಾರಾಡಬೇಕೆನ್ನು ದೃಢಸಂಕಲ್ಪ ಹೊಂದಿರುತ್ತಾರೆ ” ಎಂದು ಹೇಳಿದ್ದಾರೆ . ಪ್ರಧಾನಿ ಮೋದಿ ಅವರ ಹರ್ ಘರ್ ತಿರಂಗಾ ಅಭಿಯಾನವು ದೇಶದ ಪ್ರತಿ ಮನೆಯ ಮಕ್ಕಳಲ್ಲಿ ರಾಷ್ಟ್ರೀಯತೆ ಜತೆಗೆ ದೇಶಭಕ್ತಿ ಬೆಳೆಸಲಿದೆ. ಸ್ವಾತಂತ್ರ್ಯ ದಿನಾಚರಣೆ ಎಂಬುದು ಕೇವಲ ಐತಿಹಾಸಿಕ ಆಚರಣೆಯಾಗಬಾರದು. ಉಳಿದ ಎಲ್ಲ ವಾರ್ಷಿಕ ಹಬ್ಬಗಳಂತೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಕೂಡ ದೇಶದೆಲ್ಲೆಡೆ ಔಚಿತ್ಯಪೂರ್ಣ ಹಬ್ಬದ ವಾತಾವರಣ ಉಂಟುಮಾಡಬೇಕು. ಇದನ್ನೇ ನಮ್ಮ ಮುಂದಿನ ತಲೆಮಾರು ಕೂಡ ಎದುರು ನೋಡುತ್ತಿದೆ. ಹೀಗಿರುವಾಗ, ಸ್ವಾಂತ್ರ್ಯ ದಿನಾಚರಣೆ ಯುವ ಸಮುದಾಯಕ್ಕೆ ಆಗಸ್ಟ್ 15 ಸ್ಫೂರ್ತಿ ಮತ್ತು ದೇಶಪ್ರೇಮ ಮೂಡಿಸುವ ಹಬ್ಬವಾಗಬೇಕೆಂದು ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್, ಸ್ಥಳೀಯ ಮ.ನ.ಪಾ ಸದಸ್ಯರಾದ ವೀಣಾ ಮಂಗಳ, ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಜಪ್ಪಿನಮೊಗರಿನಲ್ಲಿ ನಡೆದ ಪಿಎಂ ಆವಾಸ್ ಯೋಜನೆ ಫಲಾನುಭವಿಯ ಮನೆಯಲ್ಲಿ ನಡೆದ ಹರ್ ಘರ್ ತಿರಂಗಾ ಅಭಿಯಾನ ಚಾಲನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.