ಬ್ಯಾಂಕ್‌ಗಳಲ್ಲಿ ಪದೇಪದೆ ಹಣ ಅಕ್ರಮ ವರ್ಗಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ಮಾಡಿದೆ. ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳ ಎಲ್ಲ ಸರ್ಕಾರಿ ಅಕೌಂಟ್ ಕ್ಲೋಸ್ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಪಿ.ಸಿ. ಜಾಫರ್ ಸುತ್ತೋಲೆ ಹೊರಡಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಎಲ್ಲ ಶಾಖೆಗಳಲ್ಲಿ ಅಕೌಂಟ್ ಕ್ಲೋಸ್‌ಗೆ ಸೂಚನೆ ನೀಡಿದ್ದಾರೆ. ಈ ಎರಡು ಬ್ಯಾಂಕ್‌ಗಳ ಎಲ್ಲ ಬ್ರ್ಯಾಂಚ್‌ಗಳಿಂದ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ಯುನಿವರ್ಸಿಟಿ ಮತ್ತಿತರ ಸಂಸ್ಥೆಗಳು ಠೇವಣಿ, ಹೂಡಿಕೆಗಳನ್ನು ತಕ್ಷಣದಿಂದ ಹಿಂಪಡೆಯಲು ಸೂಚಿಸಿದ್ದಾರೆ. ಇನ್ನು ಮುಂದೆ ಈ ಎರಡು ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಠೇವಣಿ ಹೂಡಿಕೆ ಇಡಬಾರದು. ಎಲ್ಲ ಇಲಾಖೆಗಳು ಅಕೌಂಟ್ ಕ್ಲೋಷರ್ ವರದಿಯನ್ನು ಸೆ.20ರ ಒಳಗೆ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ಪ್ರಮುಖವಾಗಿ ಎರಡು ಘಟನೆಗಳು ಕಾರಣವಾಗಿವೆ. ಕೆಐಎಡಿಬಿ 2011ರಲ್ಲಿ ರಾಜಾಜಿನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 25 ರೂ.ಗಳನ್ನು ಒಂದು ವರ್ಷದ ನಿಶ್ಚಿತ ಠೇವಣಿ ಹೂಡಿಕೆ ಇಟ್ಟಿತ್ತು. ಇದಕ್ಕೆ ಪ್ರತಿಯಾಗಿ ಇದೇ ಬ್ಯಾಂಕಿನ ಮತ್ತೊಂದು ಶಾಖೆಯಿಂದ 12 ಕೋಟಿಗಳ ಒಂದು ರಸೀದಿ ಹಾಗೂ 13 ಕೋಟಿಗಳ ಮತ್ತೊಂದು ರಸೀದಿ ನೀಡಲಾಗಿತ್ತು. ಅವಧಿ ಮುಕ್ತಾಯವಾದ ನಂತರ 13 ಕೋಟಿಗಳ ಠೇವಣಿ ನಗದೀಕರಿಸಲಾಗಿದೆ. ಆದರೆ ಎರಡನೇ ರಸೀದಿಗೆ 10 ವರ್ಷ ಕಳೆದರೂ ಹಣ ನಗದೀಕರಣವಾಗಿಲ್ಲ. ಅಕ್ರಮವಾಗಿ ಬ್ಯಾಂಕ್ ಅಧಿಕಾರಿಗಳು 14 ಕೋಟಿ ವರ್ಗಾವಣೆ ಮಾಡಿ ವಂಚನೆ ಎಸಗಿರುವ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಇದುವರೆಗೂ ಅದೆಷ್ಟೇ ಮೀಟಿಂಗ್, ಪತ್ರ ವ್ಯವಹಾರ ನಡೆದರೂ ಹಣ ವಾಪಸ್ ಆಗಿಲ್ಲ. ಇನ್ನೊಂದು ಪ್ರಕರಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದಿದೆ ಎಂದು ವರದಿಯಾಗಿದೆ. 2013ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಅವೆನ್ಯೂ ರೋಡ್‌ನ ಎಸ್‌ಬಿಐ ಬ್ರ್ಯಾಂಚ್‌ನಲ್ಲಿ 10 ಕೋಟಿ ನಿಶ್ಚಿತ ಠೇವಣಿ ಇಟ್ಟಿತ್ತು. ಅವಧಿ ಮುಕ್ತಾಯವಾಗುವ ಮೊದಲೇ ಬ್ಯಾಂಕ್ ಅಧಿಕಾರಿಗಳಿಂದ ಅಕ್ರಮ ಎಸಗಲಾಗಿದೆ. ಖಾಸಗಿ ಕಂಪನಿಯ ಸಾಲಕ್ಕೆ ಸರ್ಕಾರದ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಹೊಂದಾಣಿಕೆ ಮಾಡಲಾಗಿದೆ. ಇದುವರೆಗೂ 10 ಕೋಟಿ ಹಣ ಸರ್ಕಾರಕ್ಕೆ ವಾಪಸ್ ಆಗಿಲ್ಲ.
ಈ ಎರಡು ಪ್ರಕರಣಗಳ ಬಗ್ಗೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯಲ್ಲಿ ಚರ್ಚೆಯಾಗಿ ನಡಾವಳಿ ಸಲ್ಲಿಕೆಯಾಗಿದೆ. ಇದೇ ಮಾದರಿಯಲ್ಲಿ ಹತ್ತಾರು ಬ್ಯಾಂಕ್ ಅಕೌಂಟ್‌ಗಳಲ್ಲಿ ಅಕ್ರಮ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಸ್ಟೇಟ್ ಬ್ಯಾಂಕ್ ಇಂಡಿಯಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕೌಂಟ್ ಗಳ ಕ್ಲೋಸ್ ಮಾಡಲು ಸರ್ಕಾರದ ನಿರ್ಧಾರ ಮಾಡಿದೆ.