ಬೆಳ್ಳಾರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ರೋಡ್ ಶೋ, ಪ್ರಚಾರ ಸಭೆ
ಅಂಗಡಿ – ಮಳಿಗೆಗೆ ಕಾಲ್ನಡಿಗೆಯಲ್ಲಿ ತೆರಳಿ ಪ್ರಚಾರ ನಡೆಸಿದ ಪದ್ಮರಾಜ್ ಆರ್. ಪೂಜಾರಿ
ಬೆಳ್ಳಾರೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೆಳ್ಳಾರೆಯಲ್ಲಿ ರೋಡ್ ಶೋ ಹಾಗೂ ಪ್ರಚಾರ ಸಭೆ ನಡೆಯಿತು.
ಬೆಳ್ಳಾರೆ ಹಳೆ ಬಸ್ ನಿಲ್ದಾಣ ಬಳಿಯಿಂದ ಆರಂಭಗೊಂಡ ರೋಡ್ ಶೋ, ಹೊಸ ಬಸ್ ನಿಲ್ದಾಣದವರೆಗೆ ಸಾಗಿ ಬಂತು. ಈ ಸಂದರ್ಭ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಧ್ವಜ ಹಿಡಿದು, ಮತ ಯಾಚಿಸುತ್ತಾ ರೋಡ್ ಶೋನಲ್ಲಿ ಹೆಜ್ಜೆ ಹಾಕಿದರು.
ಮೆರವಣಿಗೆಯ ಮುಂಚೂಣಿಯಲ್ಲಿದ್ದ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಪ್ರತಿ ಅಂಗಡಿ – ಮಳಿಗೆಗಳಿಗೆ ತೆರಳಿ ಪ್ರಚಾರ ನಡೆಸುತ್ತಾ, ಮತ ಯಾಚಿಸಿದರು.
ಕೊನೆಯಲ್ಲಿ ಬೆಳ್ಳಾರೆ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ಜಿಲ್ಲೆಯಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಜಯ ಸಾಧಿಸುವುದು ನಿಶ್ಚಿತ. ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗಿ, ಮತ ಕೇಳಲಾಗುವುದು. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದರು.
ಕೃಷಿಕರು ಪರದಾಡುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಕೃಷಿಕರ ಪರವಾಗಿ ನಿಲ್ಲಬೇಕಾದ ಸರಕಾರ, ಕೃಷ್ಯುತ್ಪನ್ನವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ಇಲ್ಲಿನ ಕೃಷಿಕರನ್ನು ಬೀದಿಗೆ ತರುವ ಕೆಲಸ ನಡೆಸುತ್ತಿದೆ. ಆದರೆ ಕಾಂಗ್ರೆಸ್ ಸರಕಾರ ಜನಪರವಾಗಿದ್ದು, ಅಭಿವೃದ್ಧಿ ಕೆಲಸಗಳಿಂದಲೇ ಗುರುತಿಸಿಕೊಂಡಿದೆ. ಮುಂದೆಯೂ ಅಭಿವೃದ್ಧಿ ಕೆಲಸಗಳತ್ತಲೇ ಗಮನ ಹರಿಸಲಾಗುವುದು ಎಂದರು.
ಕಾಂಗ್ರೆಸ್ ಚುನಾವಣಾ ಜಿಲ್ಲಾ ಉಸ್ತುವಾರಿ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಟಿ.ಎಂ. ಶಹೀದ್, ಭರತ್ ಮುಂಡೋಡಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಂ, ರಾಜೀವಿ ರೈ, ಸಂಶುದ್ದೀನ್, ರಾಧಾಕೃಷ್ಣ ಬೊಳ್ಳೂರು, ಸರಸ್ವತಿ ಕಾಮತ್, ಡಾ. ರಘು, ವೆಂಕಪ್ಪ ಗೌಡ, ಅಶೋಕ್ ಅಡಮಲೆ ಮೊದಲಾದವರು ಉಪಸ್ಥಿತರಿದ್ದರು.