ಪ್ಲಾಸ್ಟಿಕ್ ರೈಸ್, ಪ್ಲಾಸ್ಟಿಕ್ ಮೊಟ್ಟೆ ಆಯ್ತು ಈಗ ನಕಲಿ ಬೆಳ್ಳುಳ್ಳಿ ಪತ್ತೆಯಾಗಿದೆ. ಬೆಳ್ಳುಳ್ಳಿ ಇಲ್ಲವಾದರೆ ಅಡುಗೆ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಬೆಳ್ಳುಳ್ಳಿ ಅಡುಗೆ ಮನೆಯಲ್ಲಿ ಮಹತ್ವ ಪಡೆದುಕೊಂಡಿದೆ. ಆದರೆ ಈ ಬೆಳ್ಳುಳ್ಳಿಯನ್ನು ನಕಲಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಮಹಾರಾಷ್ಟ್ರದ ಅಕೋಲಾದಲ್ಲಿ ನಕಲಿ ಬೆಳ್ಳುಳ್ಳಿ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಕೋಲಾದ ಬಜೋರಿಯಾ ನಗರದಲ್ಲಿ ನೆಲೆಸಿರುವ ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಸುಭಾಷ್ ಪಾಟೀಲ್ ಎಂಬುವರು ಮನೆಗೆ ಬಂದ ವ್ಯಾಪಾರಿಯೊಬ್ಬರಿಂದ ಬೆಳ್ಳುಳ್ಳಿಯನ್ನು ಖರೀದಿಸಿ, ಬೆಳ್ಳುಳ್ಳಿಯನ್ನು ಸುಲಿಯಲು ಆರಂಭಿಸಿದ್ದಾರೆ. ಚಾಕುವಿನಿಂದ ಕತ್ತರಿಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಕೂಲಂಕುಷವಾಗಿ ಪರೀಕ್ಷಿಸಿದರೆ.. ಸಿಮೆಂಟ್ ನಿಂದ ಮಾಡಿರುವುದು ಪತ್ತೆಯಾಗಿದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ಇತ್ತೀಚೆಗಷ್ಟೇ ನಿವೃತ್ತರಾಗಿರುವ ಸುಭಾಷ್ ಪಾಟೀಲ್ ಎಂಬುವರು ಈ ನಕಲಿ ಬೆಳ್ಳುಳ್ಳಿಯನ್ನು ಬಹಿರಂಗಪಡಿಸಿದ್ದಾರೆ. ಇಂತಹ ನಕಲಿ ಬೆಳ್ಳುಳ್ಳಿಯಿಂದ ತಮಗೂ ಮೋಸವಾಗಿದೆ ಎಂದು ವಿವರಿಸಿದರು. ಮಾರುಕಟ್ಟೆಯಲ್ಲಿ ಕಲಬೆರಕೆ, ವಂಚನೆ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಈ ವಿಷಯ ತುಂಬಾ ಗಂಭೀರವಾಗಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ.. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬೆಳ್ಳುಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಕೆಲವರು ದುರಾಸೆಯಿಂದ ಸಿಮೆಂಟ್ ನ ನಕಲಿ ಬೆಳ್ಳುಳ್ಳಿಯನ್ನು ಜನರಿಗೆ ಮಾರಾಟ ಮಾಡುತ್ತಿದ್ದಾರೆ. ನಗರಗಳಲ್ಲಿ ಪ್ರಸ್ತುತ ಬೆಳ್ಳುಳ್ಳಿ ಬೆಲೆ ರೂ.300ರಿಂದ ರೂ. 350ಕ್ಕೆ ಏರಿಕೆಯಾಗಿದೆ.