ಮುಂಬಯಿ: ಕರ್ನಾಟಕದ ಕಾರ್ಕಳದಲ್ಲಿ ಕಂಚಿನ ಪರಶುರಾಮನ ಪ್ರತಿಮೆ ಹೆಸರಲ್ಲಿ ಪೈಬರ್‌ನ ಪ್ರತಿಮೆ ನಿರ್ಮಿಸಿ, ನಂತರ ತೆರವುಗೊಳಿಸಿದ್ದು ಭಾರೀ ವಿವಾದಕ್ಕೀಡಾಗಿತ್ತು. ಆ ಪ್ರಕರಣ ಮಾಸುವ ಮುನ್ನವೇ ಇದೀಗ ಕಳೆದ ವರ್ಷ ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯ ಕೋಟೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ 35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನೆಲಕ್ಕೊರಗಿದೆ.ರಾಜ್‌ಕೋಟ್ ಫೋರ್ಟ್‌ನಲ್ಲಿ ಆಗಸ್ಟ್ 26ರಂದು ಸೋಮವಾರ ಮಧ್ಯಾಹ್ನ ಈ ಘಟನೆ ಜರುಗಿದೆ. ಪ್ರತಿಮೆ ಧ್ವಂಸಗೊಂಡಿರುವುದಕ್ಕೆ ನಿಖರ ಕಾರಣ ಪತ್ತೆಯಾಗಿಲ್ಲ. ಆದರೆ, ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ತೀವ್ರ ಗಾಳಿಯಿಂದಾಗಿ ಪ್ರತಿಮೆ ನೆಲಕ್ಕೆ ಉರುಳಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ನೌಕಾ ದಿನದ ಅಂಗವಾಗಿ ಕಳೆದ ವರ್ಷ ಡಿಸೆಂಬರ್ 4ರಂದು ಪ್ರಧಾನಿ ಮೋದಿ ಅವರು ಶಿವಾಜಿ ಪ್ರತಿಮೆಯ ಅನಾವರಣಗೊಳಿಸಿದ್ದರು. ಕಂಚಿನಿಂದ ನಿರ್ಮಿಸಲಾದ ಪ್ರತಿಮೆಯು ಇದ್ದಕ್ಕಿದ್ದಂತೆ ಬಿದ್ದು, ಹಲವಾರು ತುಂಡುಗಳಾಗಿ ಮುರಿದಿದೆ. ಸದ್ಯ ಲೋಹದ ಪಾದಗಳು ಮಾತ್ರ ಪೀಠದ ಮೇಲೆ ನಿಂತಿವೆ.ರಾಜ್ಯ ಸರಕಾರದ ಕಳಪೆ ನಿರ್ಮಾಣ ಕಾಮಗಾರಿಯಿಂದ ರಾಜ್ಯದ ಮಾನವು ಇಡೀ ದೇಶದ ಎದುರು ಹರಾಜಾಗಿದೆ. ಶಿವಾಜಿ ಮಹಾರಾಜರ ಪ್ರತಿಮೆ ಧ್ವಂಸವು ರಾಜ್ಯ ಸರಕಾರದ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ,” ಎಂದು ಶಿವಸೇನೆ (ಉದ್ಧವ್ ಬಣ) ಶಾಸಕ ವೈಭವ್ ನಾಯಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪ್ರತಿಮೆ ಮುರಿದು ಬಿದ್ದ ಸಂಬಂಧ ಛತ್ರಪತಿ ಶಿವಾಜಿ ಮಹಾರಾಜರ 13ನೇ ನೇರ ವಂಶಸ್ಥರಾದ ಕೊಲ್ಲಾಪುರದ ಛತ್ರಪತಿ ಯುವರಾಜ್ ಸಂಭಾಜಿರಾಜೆ ಅವರು ಏಕನಾಥ್ ಶಿಂಧೆ ನೇತೃತ್ವದ ಮಹಾಯುತಿ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
“ಪ್ರಧಾನಿ ಉದ್ಘಾಟಿಸಲು ತರಾತುರಿಯಲ್ಲಿ ನಿರ್ಮಿಸಿದ ಪ್ರತಿಮೆ ಕುಸಿದಿದೆ! ಆಗನೇ ನಾವು ಪ್ರಧಾನಮಂತ್ರಿಗೆ ಪತ್ರ ಬರೆದು ಈ ಪ್ರತಿಮೆಯನ್ನು ಬದಲಾಯಿಸಲು ಒತ್ತಾಯಿಸಿದ್ದೆವು. ಇದು ಮೂಲತಃ ಆಕಾರವಿಲ್ಲದ ಮತ್ತು ಶಿಲ್ಪದ ಪ್ರಕಾರವಲ್ಲ ಮತ್ತು ತರಾತುರಿಯಲ್ಲಿ ಸ್ಥಾಪಿಸಲಾಗಿದೆ ಎಂದಿದ್ದೆವು.”ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ನೌಕಾಪಡೆ, “ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ತಜ್ಞರ ಜೊತೆ ನೌಕಾಪಡೆ ಕೂಡ ಈ ಘಟನೆಗೆ ಕಾರಣ ಏನು ಎಂಬುದನ್ನು ತಕ್ಷಣವೇ ಪತ್ತೆಹಚ್ಚಲು ತಂಡವನ್ನು ನಿಯೋಜಿಸಿದೆ. ಪ್ರತಿಮೆಯ ದುರಸ್ತಿ ಮಾಡಲು ಹಾಗೂ ಕ್ರಮ ಕೈಗೊಳ್ಳಲಿದ್ದೇವೆ,” ಎಂದು ಹೇಳಿದೆ.
ವಿರೋಧ ಪಕ್ಷ ಕಾಂಗ್ರೆಸ್ ಕೂಡ ಪ್ರತಿಮೆಯ ವಿಡಿಯೋಗಳನ್ನು ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಟ್ರೋಲ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.