ಆಹಾರ ಸಂರಕ್ಷಿಸಿ ಇಡಲು ನಿಗದಿತ ಮಿತಿಗಿಂತ ಅಧಿಕ ಪ್ರಮಾಣದ ರಾಸಾಯನಿಕ & ಬಣ್ಣ ಬಳಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
”ಸೇಬು, ಬಾಳೆಹಣ್ಣು ಸೇರಿದಂತೆ ಕೆಲವು ಹಣ್ಣುಗಳು ಕೆಡದಂತೆ ಸುರಕ್ಷಿತವಾಗಿಡಲು ವ್ಯಾಕ್ಸ್ ಸೇರಿದಂತೆ ಕೆಲ ರಾಸಾಯನಿಕವನ್ನು ಬಳಸಲಾಗುತ್ತದೆ. ವಿದೇಶದಿಂದ ಸೇಬು ರಫ್ತು ಮಾಡಿಕೊಳ್ಳುವಾಗ ಹಣ್ಣು ಕೆಡದಂತಿಡಲು ವ್ಯಾಕ್ಸ್ ಬಳಕೆ ಅನಿವಾರ್ಯ. ಆದರೆ, ಆಹಾರ ಸುರಕ್ಷತಾ ಮಾನದಂಡಕ್ಕಿಂತ ಅಧಿಕ ಪ್ರಮಾಣದಲ್ಲಿದ್ದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ, ಅಗತ್ಯಕ್ಕಿಂತ ಹೆಚ್ಚಿನ ವ್ಯಾಕ್ಸ್ ಬಳಕೆ ಮಾಡುವವ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ,” ಎಂದು ಅವರು ಹೇಳಿದರು.
”ಬಾಳೆಹಣ್ಣು ವ್ಯಾಪಾರ ಮಾಡುವವರು ಕಾಯನ್ನು ಬೇಗ ಹಣ್ಣು ಮಾಡುವ ಉದ್ದೇಶದಿಂದ ರಾಸಾಯನಿಕ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸಹಜವಾಗಿ ಹಣ್ಣು ಮಾಡುವುದಕ್ಕೆ ಆದ್ಯತೆ ನೀಡಬೇಕು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಲಿದೆ. ರಾಸಾಯನಿಕ ಬಳಕೆ ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುವುದು,” ಎಂದರು.
”ಹಣ್ಣು ಮತ್ತು ತರಕಾರಿಗಳ 385 ಆಹಾರ ಮಾದರಿಗಳನ್ನು ಸಂಗ್ರಹಿಸಿ ಮಾದರಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವಿಶ್ಲೇಷಿಸಲಾದ 266 ಮಾದರಿಗಳಲ್ಲಿ 239 ಮಾದರಿಗಳು ಸುರಕ್ಷಿತವೆಂದು, 27 ಮಾದರಿಗಳಲ್ಲಿ ಕ್ರಿಮಿನಾಶಕ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದು ಕಂಡುಬಂದಿದೆ. ಅಲ್ಲದೆ, ಕೆಲ ತರಕಾರಿ ಮತ್ತು ಹಣ್ಣುಗಳಲ್ಲಿ ಫಂಗಸ್ ಬೆಳೆದಿರುವುದು ಕಂಡು ಬಂದಿರುವುದರಿಂದ ಅಸುರಕ್ಷಿತವಾಗಿವೆ ಎಂದು ವರದಿ ದೃಢಪಡಿಸಿದೆ,” ಎಂದು ತಿಳಿಸಿದರು.
”ಆಹಾರ ಸುರಕ್ಷತೆ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಸರಕಾರ ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಎಲ್ಲಾ ರೋಗಗಳ ಮೂಲ ಆಹಾರವೇ ಆಗಿರುವುದರಿಂದ ಗುಣಮಟ್ಟದ ಆಹಾರಕ್ಕೆ ನಮ್ಮ ಮೊದಲ ಆದ್ಯತೆಯಾಗಿದೆ,” ಎಂದರು.
”ಆಹಾರ ಮಾರಾಟ ಮಾಡುವ ಪ್ರತಿಯೊಬ್ಬರೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಮಾಣಪತ್ರ ಹೊಂದುವುದು ಕಡ್ಡಾಯವಾಗಿದೆ. ಬೀದಿ ಬದಿ ವ್ಯಾಪಾರಿಗಳು ತಳ್ಳುವ ಗಾಡಿಯವರೂ ಮುಂದಿನ ದಿನಗಳಲ್ಲಿ ಪ್ರಮಾಣಪತ್ರ ಪಡೆಯಲೇಬೇಕು. ಶೇ. 68ರಷ್ಟು ವ್ಯಾಪಾರಿಗಳು ಮಾತ್ರ ಪರವಾನಗಿ ಪಡೆದಿದ್ದಾರೆ. ಇನ್ನುಳಿದ ಉದ್ಯಮಿಗಳು ಕೂಡಲೇ ಪರವಾನಗಿ ಪಡೆಯಬೇಕು” ಎಂದು ತಿಳಿಸಿದರು.
”ಸಾರ್ವಜನಿಕರು ಸೇವಿಸುವ ಆಹಾರ ಎಷ್ಟು ಗುಣಮಟ್ಟದಾಗಿದೆ ಎಂದು ತಿಳಿದುಕೊಳ್ಳಲು ಹೋಟೆಲ್, ರೆಸ್ಟೋರೆಂಟ್, ಮಾಲ್‌ಗಳ ಫುಡ್ ಕೋರ್ಟ್‌ನಲ್ಲಿ ಆಹಾರ ಪರೀಕ್ಷಾ ಕಿಟ್ ಅಳವಡಿಸಲಾಗುತ್ತದೆ. ಇದರಿಂದ ನಾಗರಿಕರು ತಾವು ತಿನ್ನುವ ಆಹಾರ ಎಷ್ಟು ಸುರಕ್ಷಿತವಾಗಿದೆ ಎಂದು ತಿಳಿದುಕೊಳ್ಳಬಹುದು. ಸ್ಥಳೀಯ ಉದ್ಯಮಿಗಳೇ ಇದರ ನಿರ್ವಹಣೆ ಮಾಡಲಿದ್ದಾರೆ,” ಎಂದರು.
ಕ್ಯಾನ್ಸರ್ ನಂತಹ ರೋಗಗಳು ಇದೀಗ ಯುವಜನರಲ್ಲಿ ಕಾಣಿಸಿಕೊಳ್ತೇರೋದು ಆಹಾರ ಸುರಕ್ಷತೆ ಬಗ್ಗೆ ಅನುಮಾನ ಹುಟ್ಟಿದೇ