ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿರುವ ನಟ ಜೂ ಎನ್ಟಿಆರ್ ಇಂದು (ಆಗಸ್ಟ್ 31) ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಯಾವುದೋ ಸಿನಿಮಾಕ್ಕಾಗಿ ಅವರು ಬಂದಿರಲಿಲ್ಲ, ಬದಲಿಗೆ ತಮ್ಮ ತಾಯಿ ಅವರಿಗಾಗಿ ಅವರು ಕರ್ನಾಟಕಕ್ಕೆ ಬಂದಿದ್ದರು.
ಜೂ ಎನ್ಟಿಆರ್ ಅವರ ತಾಯಿ ಶಾಲಿನಿ ಅವರದ್ದು ಕುಂದಾಪುರ. ಜೂ ಎನ್ಟಿಆರ್ ಅವರಿಗೂ ಸಹ ಕುಂದಾಪುರವೆಂದರೆ ಬಹಳ ಪ್ರೀತಿ. ತಮ್ಮ ತಾಯಿಯಿಂದ ಕನ್ನಡ ಕಲಿತಿರುವ ಜೂ ಎನ್ಟಿಆರ್ ಕನ್ನಡವನ್ನು ಸುಲಭವಾಗಿ ಮಾತನಾಡಬಲ್ಲರು.
ತಾಯಿಗೆ ಕುಂದಾಪುರ ನೋಡಬೇಕು, ಉಡುಪಿ ಕೃಷ್ಣನ ದರ್ಶನ ಮಾಡಬೇಕೆಂಬ ಆಸೆ ಇತ್ತಂತೆ ಇದೇ ಕಾರಣಕ್ಕೆ ಅವರು ತಾಯಿಯನ್ನು ಕರೆದುಕೊಂಡು ಕುಂದಾಪುರಕ್ಕೆ ಬಂದಿದ್ದರು. ಅಲ್ಲದೆ ಉಡುಪಿ ಶ್ರೀಕೃಷ್ಣನ ದರ್ಶನವನ್ನು ಸಹ ಮಾಡಿಸಿದ್ದಾರೆ. ಜೂ ಎನ್ಟಿಆರ್ ಕುಟುಂಬ, ರಿಷಬ್ ಶೆಟ್ಟಿ ಕುಟುಂಬ ಇನ್ನಿತರರು ಸೇರಿ ಉಡುಪಿ ಕೃಷ್ಣನ ದರ್ಶನ ಮಾಡಿದರು. ಆ ಬಳಿಕ ಎಲ್ಲರೂ ಸೇರಿ ಬಾಳೆ ಎಲೆಯಲ್ಲಿ ಊಟ ಮಾಡಿದ್ದಾರೆ. ಚಿತ್ರಗಳನ್ನು ಜೂ ಎನ್ಟಿಆರ್, ರಿಷಬ್ ಶೆಟ್ಟಿ ಅವರುಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜೂ ಎನ್ಟಿಆರ್ ಕುಂದಾಪುರಕ್ಕೆ ಆಗಮಿಸಿದ್ದಾಗ ಅವರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿ ನಟ ರಿಷಬ್ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ನೀಲ್ ಸಹ ಈ ಸಮಯದಲ್ಲಿ ಜೂ ಎನ್ಟಿಆರ್ ಜೊತೆಗಿದ್ದರು.