ಯಾವುದೋ ಅಪರಾಧ ಪ್ರಕರಣಗಳಲ್ಲಿ ಆರೋಪಿಯೋ, ಅಪರಾಧಿಯೋ ಭಾಗಿಯಾಗಿದ್ದಕ್ಕೆ ಆತನ ಇಡೀ ಮನೆಯನ್ನೇ ಧ್ವಂಸಗೊಳಿಸುವ “ಬುಲ್ಡೋಜರ್ ನ್ಯಾಯ” ಅನುಸರಿಸಕೂಡದು ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಅಲ್ಲದೇ, ಒಬ್ಬರ ತಪ್ಪಿಗೆ ಇಡೀ ಕುಟುಂಬಕ್ಕೆ ಶಿಕ್ಷೆ ನೀಡುವುದು ಎಷ್ಟು ಸರಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆ ತೆಗದುಕೊಂಡಿದೆ.
ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಸೇರಿದಂತೆ ದೇಶದ ಹಲವೆಡೆ ಅಪರಾಧ ಪ್ರಕರಣಗಳ ಆರೋಪಿಗಳ ಮನೆಯನ್ನು ಬುಲ್ಡೋಜರ್ ಮೂಲಕ ಆಡಳಿತಾಧಿಕಾರಿಗಳು ನೆಲಸಮಗೊಳಿಸುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾದ ಬೆನ್ನಲ್ಲೇ ಸುಪ್ರೀಂಕೋರ್ಟ್‌ನ ಈ ಮಹತ್ವದ ನಡೆ ಮನ್ನಣೆ ಪಡೆದಿದೆ. ದಿಲ್ಲಿಯ ಜಹಂಗೀರ್ ಪುರಿ ಮತ್ತು ರಾಜಸ್ಥಾನದ ಉದಯಪುರದಲ್ಲಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಆರೋಪಿಗಳ ನಿವಾಸವನ್ನು ನೆಲಸಮಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹಾಗೂ ದೇಶಾದ್ಯಂತ ಈ ಬೋಲ್ಡೋಜರ್ ನ್ಯಾಯ ಪದ್ಧತಿ ಹೆಚ್ಚದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ಕೋರಿ ಸುಪ್ರೀಂಕೋರ್ಟ್‌ನಲ್ಲಿ 2 ಅರ್ಜಿಗಳು ಸಲ್ಲಿಕೆಯಾಗಿದ್ದವು.
ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠ ಸೋಮವಾರ ಅರ್ಜಿಗಳನ್ನು ವಿಚಾರಣೆ ನಡೆಸಿದೆ. ಈ ವೇಳೆ ” ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾತ್ರಕ್ಕೆ ಆರೋಪಿಯ ಮನೆಯಾಗಲಿ, ಅಪರಾಧಿಯ ಮನೆಯನ್ನಾಗಲಿ ನೆಲಸಮಗೊಳಿಸುವುದು ಎಷ್ಟು ಸರಿ ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಜತೆಗೆ ಅಪರಾಧಿ ಅಥವಾ ಆರೋಪಿಯ ಕಾರಣಕ್ಕಾಗಿ ಮನೆ ಧ್ವಂಸಗೊಳಿಸಿ ಇಡೀ ಕುಟುಂಬವನ್ನು ಶಿಕ್ಷಿಸುವ ಹಕ್ಕು ಯಾರಿಗೂ ಇಲ್ಲ ಎಂದೂ ಹೇಳಿದೆ.
ಅಕ್ರಮ ಕಟ್ಟಡ ಮಾತ್ರ ಕಡೆವಿದ್ದೇವೆ: ಕೇಂದ್ರ
ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್‌ಮೆಹ್ತಾ ಈ ಬಗ್ಗೆ ನ್ಯಾಯಪೀಠಕ್ಕೆ ಸ್ಪಷ್ಟನೆ ನೀಡಿ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕಾಗಿ ಯಾವುದೇ ಕಟ್ಟಡವನ್ನು ನೆಲಸಮ ಮಾಡಲಾಗಿಲ್ಲ. ಆದರೆ, ಕಟ್ಟಡಗಳು ಅತಿಕ್ರಮ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಾರಣಕ್ಕಷ್ಟೇ ನೆಲಸಮಗೊಳಿಸಲಾಗಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ” ಅಕ್ರಮ ಕಟ್ಟಡಗಳ ತೆರವಿಗೂ ರೀತಿ- ನೀತಿ ಇದೆ. ಈ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲಾಗುವುದು ಎಂದಿದೆ. ಅಲ್ಲದೇ, ಅಂಥ ಅಕ್ರಮ ಕಟ್ಟಡಗಳ ತೆರವಿಗೂ ಮೊದಲು ನೋಟಿಸ್ ನೀಡಿ, ಪ್ರತಿಕ್ರಿಯಿಸಲು ಸಮಯ ನೀಡಿ, ಕಾನೂನು ಪರಿಹಾರ ಹುಡುಕಿಕೊಳ್ಳಲೂ ಅವಕಾಶ ನೀಡಿ ನಂತರದಲ್ಲಿ ತೆರವಿಗೆ ಮುಂದಾಗಿ ಎಂದೂ ಸಲಹೆ ನೀಡಿದೆ. ಜತೆಗೆ ನಾವು ಯಾವುದೇ ಅಕ್ರಮ ಕಟ್ಟಡಗಳ ನಿರ್ಮಾಣವನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ತೆರವಿಗೂ ನೀತಿ ನಿಯಮ ಇರಬೇಕು, ಅವುಗಳನ್ನು ಅನುಸರಿಸಬೇಕು ಎಂದು ಹೇಳಿದೆ.