ಪ್ರತಿಬಾರಿ ಪಾಶ್ಚಿಮಾತ್ಯ ದೇಶಗಳ ಪ್ರವಾಸ ಕೈಗೊಂಡಾಗ, ಅಲ್ಲಿ ತಾವು ಪಾಲ್ಗೊಳ್ಳುವ ಸಾರ್ವಜನಿಕ ಸಂಪರ್ಕಸಭೆಗಳಲ್ಲಿ ಮೋದಿ ಸರ್ಕಾರವನ್ನು ಟೀಕಿಸಿ ವಿವಾದಕ್ಕೀಡಾಗುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗ ಪುನಃ ಅದೇ ರೀತಿ ನಡೆದುಕೊಂಡಿದ್ದಾರೆ. ಸದ್ಯಕ್ಕೆ ಅಮೆರಿಕ ಪ್ರವಾಸದಲ್ಲಿರುವ ಅವರು, ಟೆಕ್ಸಾಸ್ ನಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು ಅಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು, ಆರ್ ಎಸ್ಎಸ್ ಸಿದ್ಧಾಂತಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಜೊತೆಗೆ, ನೆರೆಯ ರಾಷ್ಟ್ರವಾದ ಚೀನಾವನ್ನು ಹಾಡಿ ಹೊಗಳಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಾ ಸಂಘವು (ಆರ್ ಎಸ್ ಎಸ್) ಭಾರತವನ್ನು ಒಂದು ಪರಿಕಲ್ಪನೆಯಾಗಿ ನೋಡುತ್ತದೆ. ಆದರೆ, ನಾವು (ಕಾಂಗ್ರೆಸ್ ಹಾಗೂ ವಿಪಕ್ಷಗಳು) ಭಾರತವನ್ನು ಹಲವು ಪರಿಕಲ್ಪನೆಗಳ ಗುಚ್ಛ ಎಂದು ಭಾವಿಸುತ್ತೇವೆ. ಭಾರತವೆಂದರೆ, ಅಪಾರವಾದ ಜನಸಂಖ್ಯೆಯ ಜೊತೆಗೆ ಹಲವಾರು ಪರಿಕಲ್ಪನೆಗಳುಳ್ಳ ದೇಶ. ಅದಕ್ಕಾಗಿ, ನಾವು ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಮುಂದುವರಿಯಲು ಸಮಾನವಾದ ಅವಕಾಶಗಳು ಸಿಗಬೇಕೆಂದು ಆಶಿಸುತ್ತೇವೆ ಹಾಗೂ ಅಂಥ ಅವಕಾಶಗಳು ಜಾತಿ, ಮತ, ಸಂಪ್ರದಾಯದಿಂದ ಮುಕ್ತವಾಗಿರಬೇಕೆಂದು ಆಶಿಸುತ್ತೇವೆ. ಇದನ್ನು ನಾನು ಹೇಳುತ್ತಿಲ್ಲ. ನಮ್ಮ ದೇಶದ ಸಂವಿಧಾನದಲ್ಲಿ ಈ ವಿಚಾರ ಅಡಕವಾಗಿದೆ’’ ಎಂದರು.
ಚುನಾವಣೆಯಲ್ಲಿ ಇದೇ ವಿಚಾರ ತೀವ್ರವಾಗಿ ಚರ್ಚೆಗೊಳಪಟ್ಟಿತು. ಕೇವಲ ಕೆಲವರು ಮಾತ್ರ ಮುಂದುವರಿಯಬೇಕು, ಕೆಲವರು ಮಾತ್ರ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕೆಂಬ ಬಿಜೆಪಿಯು ಅನೇರವಾಗಿ ಹೇಳುವುದನ್ನು ಭಾರತದ ಕೋಟ್ಯಂತರ ಮತದಾರರು ಆಲಿಸಿದರು. ಆಗ ಅವರಿಗೆ ಬಿಜೆಪಿಯು ನವ ಭಾರತದ ಅಡಿಪಾಯವಾಗಿರುವ ಈ ದೇಶದ ಸಂವಿಧಾನದ ಮೂಲ ಆಶಯಗಳಿಗೆ ಬಿಜೆಪಿಯು ಕೊಡಲಿ ಪೆಟ್ಟು ನೀಡುತ್ತಿದೆ ಎಂಬುದು ಅರಿವಾಯಿತು. ವಿಚಾರಧಾರೆಯ ಲೇಪನದೊಂದಿಗೆ ತನ್ನದೇ ಸಿದ್ಧಾಂತಗಳನ್ನು ಬಿಜೆಪಿ ಬಿತ್ತರಿಸುತ್ತಿರುವುದನ್ನು ಜನರು ಗುರುತಿಸಿದರು. ಅದು ನನ್ನ ಗಮನಕ್ಕೂ ಬಂತು. ಹಾಗಾಗಿ, ಈ ವರ್ಷದ ಚುನಾವಣೆಯ ಸಂದರ್ಭದಲ್ಲಿ ನಾನು ಮಾಡಿದ ಭಾಷಣದ ವೇಳೆ ಸಂವಿಧಾನ ರಕ್ಷಣೆಯನ್ನೇ ಪ್ರಬಲವಾಗಿ ಒತ್ತಿ ಹೇಳಿದೆ’’ ಎಂದು ತಿಳಿಸಿದರು.
ಇನ್ನು, ಭಾರತದಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗ ಸಮಸ್ಯೆಗೆ ಮೋದಿ ಸರ್ಕಾರದ ನೀತಿಗಳೇ ಕಾರಣ ಎಂದು ಟೀಕಿಸಿರುವ ಅವರು, “ಪ್ರಪಂಚದಲ್ಲಿ ಹಲವಾರು ಕಡೆ ನಿರುದ್ಯೋಗ ಸಮಸ್ಯೆಯಿದೆ. ಭಾರತದಲ್ಲಿಯೂ ನಿರುದ್ಯೋಗ ಸಮಸ್ಯೆಯಿದೆ. ಆದರೆ, ಚೀನಾ, ವಿಯೆಟ್ನಾಂ ಸೇರಿದಂತೆ ಕೆಲವು ದೇಶಗಳಲ್ಲಿ ಆ ಸಮಸ್ಯೆಯಿಲ್ಲ. ಭಾರತದಲ್ಲಿ ನಿರುದ್ಯೋಗ ಸಮಸ್ಯೆಗೆ ಕಾರಣ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿ. ಅವರ ಯಾವುದೇ ಐಡಿಯಾಗಳು ಭಾರತದಲ್ಲಿ ಉದ್ಯೋಗ ಸೃಷ್ಟಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ’’ ಎಂದು ಅವರು ತಿಳಿಸಿದ್ದಾರೆ.