ರಾಜ್ಯದಲ್ಲೆಡೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಮನೆಮಾತಾಗಿದೆ. ಈ ಸಂಘವು ಮಹಿಳಾ ಸಬಲೀಕರಣದ ಉದ್ದೇಶದೊಂದಿಗೆ ಸಾಲ ಸೌಲಭ್ಯ ನೀಡುತ್ತಿದೆ. ಆದರೆ, ಈ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕರೊಬ್ಬರು ಗಂಭೀರವಾದ ಆರೋಪ ಮಾಡಿದ್ದಾರೆ. ʼಅದು ಹೆಸರಿಗಷ್ಟೇ ಧರ್ಮಸ್ಥಳ ಸಂಘ, ಆದರೆ ಅದರಲ್ಲಿ ಧರ್ಮವೇ ಇಲ್ಲʼ ಎಂದು ಮಂಡ್ಯ ಜಿಲ್ಲೆಯ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಶಾಸಕ ಈ ರೀತಿ ಗಂಭೀರ ಆರೋಪ ಮಾಡಿರುವುದು ವಿವಾದಕ್ಕೂ ಕಾರಣವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ಧರ್ಮದ ಕೆಲಸವೇ ಇಲ್ಲ. ಕೊಟ್ಟ ಸಾಲಕ್ಕೆ ಬಡವರಿಂದ ಶೇ 40ರಷ್ಟು ಬಡ್ಡಿ ವಸೂಲಿ ಮಾಡಲಾಗುತ್ತಿದೆ ಎಂದು ಶಾಸಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಸಂಘವು ಮಹಿಳಾ ಸಂಘಗಳಿಗೆ ಸಾಲ ನೀಡಿ ಶೇ.40ರಷ್ಟು ಬಡ್ಡಿ ವಸೂಲಿ ಮಾಡುವ ಮೂಲಕ ಗ್ರಾಮೀಣ ಭಾಗದ ಮಹಿಳೆಯರನ್ನು ಶೋಷಣೆ ಮಾಡುತ್ತಿದೆ ಎಂದು ದೂರಿದ್ದಾರೆ.
ಕಡಿಮೆ ಹಣ ನೀಡಿ, ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಇದು ಜನರಿಗೆ ಅರ್ಥವಾಗುತ್ತಿಲ್ಲ. ಅದು ಹೆಸರಿಗಷ್ಟೇ ಧರ್ಮಸ್ಥಳ ಸಂಘ ಎನಿಸಿಕೊಂಡಿದೆ. ಆದರೆ, ಅಲ್ಲಿ ಧರ್ಮದ ಕೆಲಸಗಳು ನಡೆಯುತ್ತಿಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಲು ಮುಂದಾಗಿದೆ. ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವನ್ನು ಬಿಟ್ಟು, ನಮ್ಮ ಸರ್ಕಾರದ ಸಂಜೀವಿನಿ ಯೋಜನೆಯ ಮೂಲಕ ಆರ್ಥಿಕ ಚಟುವಟಿಕೆ ಆರಂಭಿಸಿ, ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ನಮ್ಮ ಹಳ್ಳಿಗಾಡಿನ ಮಹಿಳೆಯರನ್ನು ಇಂತಹ ಮೈಕ್ರೋ ಫೈನಾನ್ಸ್‌ಗಳ ಹಾವಳಿಯಿಂದ ಹೊರತರಬೇಕು. ಈ ಉದ್ದೇಶದಿಂದ ನಮ್ಮ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇದರಲ್ಲಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದಿದ್ದಾರೆ.
ಏನಿದು ಯೋಜನೆ?: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ 1982ರಲ್ಲಿ ಬೆಳ್ತಂಗಡಿಯಲ್ಲಿ ಚಾಲನೆ ನೀಡಲಾಯಿತು. ಇದನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು ಎನ್ನಲಾಗಿದೆ. ಸದ್ಯ ಈ ಯೋಜನೆಯು ರಾಜ್ಯದ ಪ್ರತಿ ಹಳ್ಳಿಗೂ ವ್ಯಾಪಿಸಿದೆ. ಸದ್ಯ ಪ್ರತಿ ಹಳ್ಳಿಯಲ್ಲೂ ಮಹಿಳೆಯ ಗುಂಪುಗಳನ್ನು ರಚಿಸಿ, ಅವರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಪ್ರತಿ ವಾರವು ಮರುಪಾವತಿ ಮಾಡುತ್ತಿದೆ. ಈಗ ಕಾಂಗ್ರೆಸ್ ಶಾಸಕರ ಈ ಆರೋಪವು ವಿವಾದ ಸೃಷ್ಟಿಸುವಂತಿದೆ.
ಈ ಯೋಜನೆಯಿಂದ ಸಾಲ ಪಡೆದಿರುವ ಅದೆಷ್ಟೋ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ ಎಂದು ವರದಿಯಾಗಿದ್ದು, ಕೆಲವೆಡೆ ಈ ಯೋಜನೆಯ ಬಗ್ಗೆ ಅಪಸ್ವರವೂ ಕೇಳಿಬಂದಿತ್ತು. ಇದೀಗ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಅವರ ಹೇಳಿಕೆಯೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಗಂಭೀರ ಆರೋಪ ಮಾಡುವಂತಿದೆ.