ದೇಶಾದ್ಯಂತ ಲೋಕಸಭಾ ಕ್ಷೇತ್ರಗಳು ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟಿಗೆ ಚುನಾವಣೆ ನಡೆಸುವಂತೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟವು ಶಿಫಾರಸುಗಳಿಗೆ ಬುಧವಾರ ಅನುಮೋದನೆ ಕೊಟ್ಟಿದೆ.
ಲೋಕಸಭಾ ಚುನಾವಣೆಯ ವೇಳೆ ಬಿಜೆಪಿಯು ‘ಒಂದು ರಾಷ್ಟ್ರ ಒಂದು ಚುನಾವಣೆ’ ಜಾರಿಗೆ ತರುವುದಾಗಿ ಭರವಸೆ ಕೊಟ್ಟಿತ್ತು. ಅದಕ್ಕಾಗಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿಯನ್ನು ಸ್ಥಾಪಿಸಿತ್ತು. ಎರಡು ಹಂತಗಳಲ್ಲಿ ದೇಶದಲ್ಲಿ ಚುನಾವಣೆ ನಡೆಸಲು ಶಿಫಾರಸು ಮಾಡಲಾಗಿದೆ. ಲೋಕಸಭೆ ಮತ್ತು ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆದರೆ, ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಮತ್ತೊಂದು ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ.
ಈ ಬಗ್ಗೆ ರಾಜಕೀಯ ಪಕ್ಷಗಳು ಸೇರಿದಂತೆ ತಜ್ಞರಿಂದ ಚರ್ಚೆಗಳು ನಡೆಯಬೇಕಾಗುತ್ತದೆ. ಅನಂತರ ಸಂಸತ್ ಅಧಿವೇಶನದ ವೇಳೆ ಮಸೂದೆಯಾಗಿ ಮಂಡಿಸಲಾಗುತ್ತದೆ. ಲೋಕಸಭೆ, ರಾಜ್ಯಸಭೆಗಳಲ್ಲಿ ಅನುಮೋದನೆಯ ಬಳಿಕ ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗುತ್ತದೆ.
ಈಗ ವಿಧಾನಸಭೆ, ಲೋಕಸಭೆ, ಸ್ಥಳೀಯ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸಲಾಗುತ್ತಿದೆ. ಅದರಿಂದ ಭದ್ರತಾ ಸಿಬ್ಬಂದಿ ಹಾಗೂ ಚುನಾವಣಾ ಅಧಿಕಾರಿಗಳ ನಿಯೋಜನೆಗೆ ಹೆಚ್ಚುವರಿ ಹೊರೆಯಾಗುತ್ತಿದೆ. ಇತರೆ ಕೆಲಸಗಳಿಗೂ ಅಡಚಣೆಯಾಗುತ್ತಿದೆ ಹಾಗೂ ಚುನಾವಣಾ ವೆಚ್ಚವು ಹೆಚ್ಚುತ್ತಿದೆ. ‘ಒಂದು ರಾಷ್ಟ್ರ ಒಂದು ಚುನಾವಣೆ’ ಜಾರಿಯಾದರೆ ವೆಚ್ಚದಲ್ಲಿ ಕಡಿತವಾಗಲಿದೆ ಎಂದು ನಂಬಲಾಗಿದೆ.