ಪುತ್ತೂರು: ದ.ಕ ಜಿಲ್ಲಾ ವಿಧಾನ ಪರಿಷತ್ತಿನ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಬೊಟ್ಯಾಡಿ ಅವರನ್ನು ಕಣಕ್ಕಿಳಿಸಲಾಗಿದೆ.
ಸ್ಥಾನಕ್ಕೆ ಕೋಟ ಶ್ರೀನಿವಾಸ್ ಪೂಜಾರಿಯವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು ಬಿಜೆಪಿಯಿಂದ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಬೊಟ್ಯಾಡಿಯವರನ್ನು ಆಯ್ಕೆ ಮಾಡಲಾಗಿದೆ. ವಿಧಾನ ಪರಿಷತ್ ಉಪಚುನಾವಣೆಯು ಅಕ್ಟೋಬರ್ 21ರಂದು ನಡೆಯಲಿದೆ. ಮತ ಎಣಿಕೆಯು ಅಕ್ಟೋಬರ್ 24ರಂದು ನಡೆಯಲಿದೆ. ಉಪಚುನಾವಣೆಗೆ ಬಿಜೆಪಿಯಿಂದ ಹಲವು ನಾಯಕರ ಹೆಸರುಗಳು ಕೇಳಿ ಬರುತ್ತಿದ್ದು ಕೊನೆಯದಾಗಿ ಕಿಶೋರ್ ಕುಮಾರ್ ಬೊಟ್ಯಾಡಿ ಯವರನ್ನು ಕಣಕ್ಕೆ ಇಳಿಸಲಾಗಿದೆ. ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಕಿಶೋರ್ ಕುಮಾರ್ ಪುತ್ತೂರು ಅವರ ಹೆಸರನ್ನು ಅಂತಿಮಗೊಳಿಸಿದೆ.
ಆದರೆ ಬಿಜೆಪಿ ಹೈಕಮಾಂಡಿನಿಂದ ಇಂದು ಹೆಸರು ಘೋಷಣೆಯಾಗಿದ್ದು ಅಚ್ಚರಿ ಎನ್ನುವಂತೆ ಬಿಜೆಪಿಯಲ್ಲಿ ಸುದೀರ್ಘ ಅವಧಿಯಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದ ಕಿಶೋರ್ ಕುಮಾರ್ ಪುತ್ತೂರು ಜಾಕ್ ಪಾಟ್ ಹೊಡೆದಿದ್ದಾರೆ. ಕಳೆದ ಬಾರಿ ಪುತ್ತೂರಿನಲ್ಲಿ ಕಿಶೋರ್ ಕುಮಾರ್ ವಿಧಾನಸಭೆ ಅಭ್ಯರ್ಥಿಯಾಗುತ್ತಾರೆ ಎನ್ನುವ ಸುದ್ದಿಯಿತ್ತು.
ಆದರೆ, ಕೊನೆಕ್ಷಣದಲ್ಲಿ ಟಿಕೆಟ್ ತಪ್ಪಿತ್ತು. ಟಿಕೆಟ್ ಸಿಕ್ಕಿಲ್ಲವೆಂದು ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧಿಸಿದಾಗ, ಕಿಶೋರ್ ಕುಮಾರ್ ಮತ್ತು ಪಟಾಲಂ ಬಿಜೆಪಿ ಪರವಾಗಿ ನಿಂತಿತ್ತು. ಆದರೆ ನಳಿನ್ ಕುಮಾರ್ ವಿರೋಧಿ ಅಲೆ ಮತ್ತು ಬಿಜೆಪಿ ನಾಯಕರ ಕುರಿತ ವಿರೋಧಾಭಿಪ್ರಾಯದಿಂದಾಗಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಿತ್ತು. ಇದರಿಂದ ಕಿಶೋರ್ ಕುಮಾರ್ ಆದಿಯಾಗಿ ಬಿಜೆಪಿ ಪರ ನಿಂತವರು ತೀವ್ರ ಮುಖಭಂಗ ಅನುಭವಿಸಿದ್ದರು.
ಈ ಬಾರಿ ಕೋಟರಿಂದ ತೆರವಾದ ಸ್ಥಾನಕ್ಕೆ ಅರುಣ್ ಪುತ್ತಿಲ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಆರಂಭದಲ್ಲಿತ್ತು. ಇದರ ನಡುವಲ್ಲೇ ಅರುಣ್ ಪುತ್ತಿಲ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರು ನೀಡಿದ್ದು ಅವರ ಹೆಸರನ್ನು ಮರೆಗೆ ಸರಿಸಿತ್ತು. ಕಳೆದ ಒಂದು ವಾರದಿಂದ ದೆಹಲಿಯಲ್ಲೇ ಬೀಡು ಬಿಟ್ಟು ಟಿಕೆಟಿಗಾಗಿ ಕಸರತ್ತು ನಡೆಸಿದ್ದ ನಳಿನ್ ಕುಮಾರ್ ಈ ಬಾರಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಬಿಲ್ಲವ ಕೋಟಾದಿಂದ ಸತೀಶ್ ಕುಂಪಲ ಹೆಸರೂ ಕೇಳಿಬಂದಿತ್ತು. ಆದರೆ, ಕೊನೆಕ್ಷಣದಲ್ಲಿ ಕಿಶೋರ್ ಕುಮಾರ್ ಜಾಕ್ ಪಾಟ್ ಹೊಡೆದಿದ್ದಾರೆ.