ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಯಾಗಲಿದೆ. ವಿಧಾನಸಭಾ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮೈತ್ರಿ ಮುನ್ನಡೆ ಪಡೆದುಕೊಂಡಿದೆ. ಮೈತ್ರಿಕೂಟವು 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚಿಸುವುದು ಖಚಿತವಾಗಿದೆ.
ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.
ಮತ ಎಣಿಕೆಯಲ್ಲಿ ಮಧ್ಯಾಹ್ನ 3.30 ಗಂಟೆಯ ವೇಳೆಗೆ 49 ಕ್ಷೇತ್ರಗಳಲ್ಲಿ ಎನ್‌ಸಿ – ಕಾಂಗ್ರೆಸ್ ಮುನ್ನಡೆ ಪಡೆದುಕೊಂಡಿದೆ. 29 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಪಿಡಿಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 9 ಕ್ಷೇತ್ರಗಳಲ್ಲಿ ಇತರೆ ಅಭ್ಯರ್ಥಿಗಳು ಮುನ್ನಡೆ ಪಡೆದುಕೊಂಡಿದ್ದಾರೆ.
ಎನ್‌ಸಿ-ಕಾಂಗ್ರೆಸ್ ಹಾದಿ ಸುಲಭ
ಚುನಾವಣಾ ಪೂರ್ವ ಸಮೀಕ್ಷೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ಫಲಿತಾಂಶ ಬರಬಹುದು ಎಂದು ಹೇಳಿದ್ದವು, ಹಾಗೆ ಹರಿಯಾಣದಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸಲಿವೆ ಎಂದಿದ್ದರು. ಆದರೆ ಫಲಿತಾಂಶದಲ್ಲಿ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿವೆ. ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದು, ಬಿಜೆಪಿ ಮೂರನೇ ಬಾರಿ ಸರ್ಕಾರ ರಚಿಸಲಿದೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ ಮುನ್ನಡೆ ಪಡೆದುಕೊಂಡಿದ್ದು, ಸರಳ ಬಹುಮತ ಪಡೆದು ಸರ್ಕಾರ ರಚಿಸುವ ಉತ್ಸಾಹದಲ್ಲಿದೆ.
ಬಿಜೆಪಿ ಲೆಕ್ಕಾಚಾರವೇನು?
ಹಿನ್ನಡೆಯಾದರೂ ಬಿಜೆಪಿ ಅಧಿಕಾರ ಪಡೆಯುವ ಲೆಕ್ಕಾಚಾರ ಇನ್ನೂ ಮುಗಿದಿಲ್ಲ, ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು, ಅದರಲ್ಲೂ ಬಿಜೆಪಿ ಅಧಿಕಾರ ಹಿಡಿಯಲು ಏನೆಲ್ಲಾ ಕಸರತ್ತು ಮಾಡುತ್ತದೆ ಎನ್ನುವುದನ್ನು ಹಲವು ರಾಜ್ಯಗಳಲ್ಲಿ ಮಾಡಿ ತೋರಿಸಿದೆ.