ಬೆಂಗಳೂರು: ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ತಾರತಮ್ಯವಾಗಿದೆ. ತೆರಿಗೆ ತಾರತಮ್ಯ ಖಂಡಿಸಿ “ನಮ್ಮ ತೆರಿಗೆ ನಮ್ಮ ಹಕ್ಕು” ಎಂದು ಪ್ರತಿಭಟನೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅತಿಹೆಚ್ಚು ತೆರಿಗೆ ಪಾವತಿಸುವ ನಮ್ಮ ರಾಜ್ಯಕ್ಕೆ ತಾರತಮ್ಯವಾಗುತ್ತಿದೆ. ನಮ್ಮ ತೆರಿಗೆ ಹಣ ಉತ್ತರ ಪ್ರದೇಶ, ದೆಹಲಿ, ಬಿಹಾರಕ್ಕೆ ಕೊಡುತ್ತಿದ್ದಾರೆ. ಆಂಧ್ರಕ್ಕಿಂತಲೂ ಕಡಿಮೆ ಹಣ ನಮಗೆ ನೀಡಿದ್ದಾರೆ. ಅವರಿಗಿಂತ ನಾವು ಕೀಳಾ ಹಾಗಾದರೆ ಎಂದು ಕೇಳಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಕೇಂದ್ರ ಸರ್ಕಾರದಲ್ಲಿ ಐವರು ಸಚಿವರು ನಮ್ಮ ರಾಜ್ಯದಿಂದ ಇದ್ದಾರೆ. ನಮ್ಮಲ್ಲೇ ಇದ್ದುಕೊಂಡು ಈಗ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
ಜಾಹೀರಾತು ವಿವಾದ: ರಾಜ್ಯ ಸರ್ಕಾರದ ಜಾಹೀರಾತಿಗೆ ವಿಪಕ್ಷಗಳು ಆಕ್ಷೇಪ ಎತ್ತಿರುವ ವಿಚಾರವಾಗಿ ಮಾತನಾಡಿದ ಅವರು, ನಮಗಿರುವ ಮಾಹಿತಿಯನ್ನು ಜಾಹಿರಾತು ರೂಪದಲ್ಲಿ ನೀಡಿದ್ದೇವೆ. ನಾವು ಮುನ್ನಡೆಯುತ್ತಿರುವ ದಾರಿಯ ಆಧಾರದ ಮೇಲೆ ಮತ್ತು ನಮ್ಮ ಭಾವನೆಗಳ ಮೇಲೆ ಜಾಹೀರಾತು ನೀಡಿದ್ದೇವೆ. ನಮ್ಮ ಸರ್ಕಾರದ ಸಾಧನೆ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡುತ್ತೇವೆ ಎಂದರು.
5 ನೇ ಹಂತದ ಕುಡಿಯುವ ಯೋಜನೆಗೆ ಚಾಲನೆ: ಈ ವರ್ಷ ದಸರಾ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿ ಮಳೆ-ಬೆಳೆ ಕೊಟ್ಟಿದ್ದಾಳೆ. ತಮಿಳುನಾಡಿನ ಹೋರಾಟ ಕಡಿಮೆಯಾಗಿದೆ. ಎಲ್ಲಾ ಅಣೆಕಟ್ಟೆಗಳು ತುಂಬಿವೆ. ಕಟ್ ಆಗಿದ್ದ ತುಂಗಭದ್ರಾ ಡ್ಯಾಂನ ಗೇಟ್ ನ್ನು ಆರು ದಿನದಲ್ಲೇ ಕೂರಿಸಿ ನೀರು ಪೋಲಾಗುತ್ತಿದ್ದದ್ದನ್ನು ನಿಲ್ಲಿಸಿದ್ದೇವೆ. ಅ.16 ಬೆಂಗಳೂರಿಗೆ ವಿಶೇಷ ದಿನವಾಗಿದೆ. ಐದನೇ ಹಂತದ ಕುಡಿಯುವ ಯೋಜನೆ ಚಾಲನೆ ಸಿಗಲಿದೆ. ಇದರಿಂದ 50 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.