ನವದೆಹಲಿ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಬಣದ ಸದಸ್ಯ ಬಾಬಾ ಸಿದ್ದಿಕಿ ಅವರನ್ನು ಶನಿವಾರ ಸಂಜೆ ಮುಂಬೈನ ಬಾಂದ್ರಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಗುಂಡಿನ ದಾಳಿಯ ನಂತರ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಬಾಂದ್ರಾ (ಪಶ್ಚಿಮ)ದಿಂದ ಮೂರು ಬಾರಿ ಶಾಸಕರಾಗಿರುವ ಸಿದ್ದಿಕಿ ಅವರ ಪುತ್ರ ಬಾಂದ್ರಾ (ಪೂರ್ವ) ಶಾಸಕ ಜೀಶಾನ್ ಅವರ ಕಚೇರಿಯಲ್ಲಿ ಗುಂಡು ಹಾರಿಸಿದ್ದರು. ಹತ್ತಿರದಿಂದ ಮೂರು ಬಾರಿ ಗುಂಡು ಹಾರಿಸಲಾಗಿತ್ತು.
ಈ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಸಲ್ಮಾನ್ ಖಾನ್ ಅಥವಾ ದಾವೂದ್ ಇಬ್ರಾಹಿಂ ಗ್ಯಾಂಗ್‌ಗೆ ಸಹಾಯ ಮಾಡುವವರು ಯಾರೇ ಆಗಲಿ ಇದಕ್ಕೆ ಸಿದ್ಧರಾಗಿರಬೇಕು ಎಂದು ಗ್ಯಾಂಗ್‌ನ ಸದಸ್ಯರೊಬ್ಬರು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಾಯಕ ಸಿಧು ಮೂಸೆವಾಲಾ ಹತ್ಯೆ ಮತ್ತು ಸಲ್ಮಾನ್ ಖಾನ್ ಅವರ ಮುಂಬೈ ಮನೆಯಲ್ಲಿ ನಡೆದ ಗುಂಡಿನ ದಾಳಿಯ ಮಾಸ್ಟರ್ ಮೈಂಡ್ ಲಾರೆನ್ಸ್ ಬಿಷ್ಣೋಯ್ ಎಂದು ಹೇಳಲಾಗಿದೆ. ವಾರದ ಹಿಂದೆಯಷ್ಟೇ ಎನ್‌ಸಿಪಿಯ ಅಜಿತ್ ಪವಾರ್ ಬಣದ ಮತ್ತೊಬ್ಬ ನಾಯಕ ಸಚಿನ್ ಕುರ್ಮಿ ಅವರನ್ನು ಮುಂಬೈನ ಬೈಕುಲ್ಲಾದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.
ಕಾಂಗ್ರೆಸ್‌ನೊಂದಿಗೆ ಸುಮಾರು ಐದು ದಶಕಗಳ ಕಾಲ ಕಳೆದ ಸಿದ್ದಿಕಿ, ದಿವಂಗತ ನಟ ಮತ್ತು ಕಾಂಗ್ರೆಸ್ ನಾಯಕ ಸುನೀಲ್ ದತ್ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದರು. ದತ್ ಅವರ ಮರಣದ ನಂತರ, ಸಿದ್ದಿಕಿ ಮಾಜಿ ಕಾಂಗ್ರೆಸ್ ಸಂಸದ ಮತ್ತು ಅವರ ಪುತ್ರಿ ಪ್ರಿಯಾ ದತ್ ಅವರೊಂದಿಗೆ ಕೆಲಸ ಮುಂದುವರೆಸಿದರು.
ಆದಾಗ್ಯೂ, ಈ ವರ್ಷದ ಫೆಬ್ರವರಿಯಲ್ಲಿ ಸಿದ್ದಿಕಿ ಕಾಂಗ್ರೆಸ್ ತೊರೆದು ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿದರು. ನಂತರ ಅವರ ಮಗ ಜೀಶಾನ್ ಅವರನ್ನು ಆಗಸ್ಟ್‌ನಲ್ಲಿ ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗಿತ್ತು.