ದಕ್ಷಿಣಕನ್ನಡ: ನವರಾತ್ರಿಯಲ್ಲಿ ಹುಲಿವೇಷಗಳ ಕುಣಿತ ಸಾಮಾನ್ಯವಾಗಿದ್ದು, ಹಿಂದೆ ಸಾಂಪ್ರದಾಯಿಕವಾಗಿ ಕುಣಿಯುತ್ತಿದ್ದ ಹುಲಿವೇಷ ತಂಡಗಳಲ್ಲಿ ಇಂದು ಹೊಸತನದ ನೃತ್ಯಗಳೂ ಸೇರಿಕೊಂಡಿವೆ.
ಈ ಹೊಸತನದ ನಡುವೆ ಇಂದು ಜಿಮ್ನಾಶಿಯಂ ಕೂಡಾ ಬಳಕೆಯಾಗುತ್ತಿದ್ದು, ಕೆಲವು ಹುಲಿವೇಷ ತಂಡಗಳಲ್ಲಿ ವಿವಿಧ ಬಗೆಯಲ್ಲಿ ಹಾರುವ ಹುಲಿಗಳಿಗೇ ಹೆಚ್ಚು ಡಿಮ್ಯಾಂಡ್. ಹೀಗೆ ಎಲ್ಲೆದರಲ್ಲಿ ಹಾರುವ ಈ ಹುಲಿವೇಷ ಕಲಾವಿದರು ಜನರನ್ನು ಹೆಚ್ಚು ಮನೋರಂಜಿಸುತ್ತಾರೆ ಎನ್ನುವ ಕಾರಣಕ್ಕೆ ಜಂಪಿಂಗ್ ಕಲಾವಿದರಿಗೆ ಬೇಡಿಕೆ ಹೆಚ್ಚಾಗಲು ಕಾರಣವೂ ಆಗಿದೆ. ಇದೇ ರೀತಿಯ ಜಂಪಿಂಗ್ ಕಲಾವಿದನೊಬ್ಬನ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಹುಲಿವೇಷ ಕುಣಿತಕ್ಕೆ ಸಜ್ಜುಗೊಳಿಸಿದ್ದ ಸ್ಟೇಜ್ ನಲ್ಲಿ ಈ ಕಲಾವಿದ ಹಲವು ಪಲ್ಟಿಗಳನ್ನು ಹೊಡೆಯುವ ಮೂಲಕ ಪ್ರೇಕ್ಷಕರ ಮನರಂಜಿಸಿದ್ದಾರೆ. ಹುಲಿವೇಷ ಹಾಕುವ ಮೊದಲು ಸಂಪ್ರದಾಯ ಪ್ರಕಾರದ ಊದುಪೂಜೆ ನಡೆಯುತ್ತದೆ. ಈ ಪೂಜೆಯ ಬಳಿಕ ಹುಲಿವೇಷ ಹಾಕುವ ಕಲಾವಿದರು ಬಣ್ಣ ಹಾಕದೇ ಹುಲಿ ನರ್ತನ ಮಾಡುವ ಸಂಪ್ರದಾಯವಿದೆ. ಒಂದು ತಂಡದ ಎಲ್ಲಾ ಕಲಾವಿದರೂ ಈ ಊದುಪೂಜೆಯ ಬಳಿಕ ಕುಣಿಯುವುದು ಕಡ್ಡಾಯವೂ ಆಗಿದ್ದು, ಹುಲಿವೇಷಧಾರಿಗಳ ಜೊತೆಗೆ ಹುಲಿವೇಷ ತಂಡಗಳನ್ನು ನಡೆಸುವ ಜವಾಬ್ದಾರಿ ಹೊತ್ತವರೂ ಕುಣಿಯುತ್ತಾರೆ. ಊದುಪೂಜೆಯ ಬಳಿಕ ಕಲಾವಿದರಿಗೆ ಹುಲಿಯ ಬಣ್ಣಗಳನ್ನು ಬಳಿಯಲು ಆರಂಭಿಸಲಾಗುತ್ತದೆ.
ಹೀಗೆ ನಡೆದ ಊದುಪೂಜೆಯ ಸಂದರ್ಭದಲ್ಲಿ ವೈರಲ್ ವಿಡಿಯೋ ದಲ್ಲಿರುವ ಕಲಾವಿದ ಜಂಪಿಂಗ್ ಮಾಡಿ ಕುಣಿಯುತ್ತಿರುವುದು ಸ್ಪಷ್ಟವಾಗಿದೆ. ಕಲಾವಿದನ ಈ ಸ್ಟಂಟ್ ಕಂಡು ನೆರೆದಿದ್ದ ಪ್ರೇಕ್ಷಕರೆಲ್ಲಾ ಸೀಟಿ ಹೊಡೆದು ಸಂಭ್ರಮಿಸಿ,ಹುರಿದುಂಬಿಸುತ್ತಿರುವುದೂ ದಾಖಲಾಗಿದೆ.