ಜನಸಂಘಕ್ಕೆ ತಮ್ಮ ಕುಟುಂಬವನ್ನು ಮುಡಿಪಾಗಿಟ್ಟಿದ್ದ ಹಿಂದುತ್ವದ ಕಟ್ಟಾಳು ಕಿಶೋರ್ ಕುಮಾರ್ ಪುತ್ತೂರು ವಿಧಾನ ಪರಿಷತ್ತಿಗೆ ಹೋದರೆ ಪಕ್ಷಕ್ಕೆ ದೊಡ್ಡ ಬಲ ಬರಲಿದೆ. ಮುಂದೆ ಯಾರಾದ್ರೂ ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಹಾಕಿದರೆ ಅವರ ಮಂಡೆ ಒಡೆಯುತ್ತಾರೆಂಬ ನಂಬಿಕೆ ನನಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಬಂಟ್ವಾಳದ ಬಂಟರ ಭವನದಲ್ಲಿ ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಡೀವಿ ಸದಾನಂದ ಗೌಡ ಮಾತನಾಡಿದರು. ಕಿಶೋರ್ ಕುಮಾರ್ ಅವರು ನಮ್ಮ ಪುತ್ತೂರು ತಾಲೂಕಿನ ಕಟ್ಟಕಡೆಯ ಗ್ರಾಮ ಸರ್ವೆಯವರು. ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗ್ರಾಮದಲ್ಲಿ ಕಿಶೋರ್ ಅವರ ತಂದೆ ರಾಮಣ್ಣ ಭಂಡಾರಿ ಜನಸಂಘದ ಕಟ್ಟಾಳುವಾಗಿದ್ದರು. ಪಕ್ಕದಲ್ಲಿ ವಿನಯ ಕುಮಾರ್ ಸೊರಕೆ ಮತ್ತು ಮುತ್ತಪ್ಪ ರೈ ಮನೆಗಳಿದ್ದರೂ, ರಾಮಣ್ಣ ಭಂಡಾರಿಯವರು ಅವರ ದುಡ್ಡು, ದೌಲತ್ತಿಗೆ ಸೊಪ್ಪು ಹಾಕಿದವರಲ್ಲ.
ಹಣಬಲದ ರಾಜಕೀಯ ನಡೆಯುತ್ತಿದ್ದಾಗ, ಕಾಂಗ್ರೆಸಿಗರ ಭರಾಟೆ ಇದ್ದರೂ ರಾಮಣ್ಣ ಭಂಡಾರಿಯವರು ಮಾತ್ರ ನಾನು ಸತ್ತರೂ ಜನಸಂಘ, ಬದುಕಿದರೂ ಜನಸಂಘ ಎಂದು ಬದ್ಧತೆ ತೋರಿದ್ದರು. ದೇಶಕ್ಕೆ ತಮ್ಮ ಕುಟುಂಬವನ್ನೇ ಮುಡಿಪಾಗಿಟ್ಟಿದ್ದವರು ಕಿಶೋರ್ ಕುಟುಂಬ. ಸಣ್ಣ ಸಮುದಾಯಕ್ಕೆ ಟಿಕೆಟ್ ಕೊಟ್ಟಿದ್ದಕ್ಕೆ ವಿಜಯೇಂದ್ರ ಅವರನ್ನು ಅಭಿನಂದಿಸುತ್ತೇನೆ.
ಕಿಶೋರ್ ಕುಮಾರ್ ಈ ಚುನಾವಣೆ ಗೆಲ್ಲುವುದರಲ್ಲಿ ಸಂಶಯ ಇಲ್ಲ. ಅತಿ ಹೆಚ್ಚು ಅಂತರದಲ್ಲಿಯೇ ಗೆಲ್ತೀರಿ. ನೀವು ಪರಿಷತ್ ಸದಸ್ಯರಾದ ಬಳಿಕ ಮನೆ ಮಠ ಬಿಟ್ಟು ಸಮಾಜದ ಕೆಲಸಕ್ಕೆ ಹೋಗಬೇಕು. ವಿಜಯೇಂದ್ರ ಕೈಹಿಡಿದು ಪಕ್ಷ ಬಲಪಡಿಸಬೇಕು. ಸಮಾಜಕ್ಕೆ ಆಧಾರವಾಗಬೇಕು.
ವಿಧಾನ ಪರಿಷತ್ ಸ್ಥಾನ ಅಂದರೆ ಯಾವತ್ತೂ ಅತೃಪ್ತರನ್ನು ಕಳಿಸಿಕೊಡುವ ವೇದಿಕೆ ಆಗಬಾರದು. ರಾಜಕಾರಣದಲ್ಲಿ ಸ್ಥಾನ ಸಿಗದಿದ್ದರೆ ಎಂಎಲ್ಸಿ ಕೊಡುತ್ತೇವೆಂದು ಸಮಾಧಾನ ಪಡಿಸುವ ಪ್ರಯತ್ನ ಆಗುತ್ತದೆ. ಆದರೆ ಈ ರೀತಿಯ ಕೆಲಸ ಆಗಬಾರದು. ಪ್ರಾಮಾಣಿಕ ರಾಜಕೀಯಕ್ಕೆ ವೇದಿಕೆ ಆಗಬೇಕು. ಕಿಶೋರ್ ಕುಮಾರ್ ಈ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂದು ಸದಾನಂದ ಗೌಡ ಹೇಳಿದರು.