ತೊಕ್ಕೊಟ್ಟುವಿನ ಮೇಲ್ಸೇತುವೆಯಲ್ಲಿ ಅ.16ರ ಬುಧವಾರ ರಾತ್ರಿ ಕುಂಪಲದ ಶರತ್ ಮತ್ತು ಕೇರಳದ ಇಬ್ರಾಹಿಂ ಖಲೀಲ್ ಅವರ ಕಾರುಗಳ ಮಧ್ಯೆ ಸಣ್ಣ ಅಪಘಾತ ನಡೆದಿದೆ.
ಈ ವಿಚಾರದಲ್ಲಿ ಖಲೀಲ್ ಮತ್ತು ಆತನ ಸಹೋದರ ಅಸಿಫ್, ಶರತ್ ಅವರಿಗೆ ಹಲ್ಲೆ ನಡೆಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲ್ಲೆ ವಿಚಾರದಲ್ಲಿ ಶರತ್ ಅವರ ಸ್ನೇಹಿತ ಅರ್ಜುನ್ ಮಾಡೂರು ಪೊಲೀಸ್ ಠಾಣೆಗೆ ಆಗಮಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದ್ದ ವೇಳೆ ಏಕಾಏಕಿ ಒಳ ನುಗ್ಗಿದ ಆರೋಪಿ ಆಸಿಫ್, ಅರ್ಜುನ್ ಮಾಡೂರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಇನ್ಸ್ ಪೆಕ್ಟರ್ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೊರಗಡೆ ತೆರಳಿದ್ದರು
ಘಟನೆಯ ಸಂದರ್ಭದಲ್ಲಿ ಅರ್ಜುನ್ ಸ್ನೇಹಿತರು ಆಸಿಫ್ ನನ್ನು ತಡೆದಿದ್ದು, ಎಚ್ಚೆತ್ತ ಪೊಲೀಸರು ಕೂಡಲೇ ಆತನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ದೃಶ್ಯಗಳು ಠಾಣಾ ಇನ್ಸ್ ಪೆಕ್ಟರ್ ಅವರ ಕೊಠಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಹಲ್ಲೆಗೊಳಗಾದ ಅರ್ಜುನ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಹಲ್ಲೆಗೈದ ಆಸಿಫ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಮಧ್ಯರಾತ್ರಿ ಹಿಂದೂ ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿದ್ದಾರೆ. ಅರ್ಜುನ್ ಗೆ ಹಲ್ಲೆ ನಡೆಸಿದ ಆರೋಪಿ ಆಸಿಫ್ ನನ್ನು ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಧನ್ಯ ನಾಯಕ್ ಅವರು ಠಾಣೆಯ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಗೋಪಾಲ್ ಕುತ್ತಾರ್, ಪುನೀತ್ ಅತ್ತಾವರ ಠಾಣಾಧಿಕಾರಿಯವರಲ್ಲಿ ಮಾತುಕತೆ ನಡೆಸಿದರು.