ಪಾವೂರು: ಬಾಲಕಿಯೊಬ್ಬಳು ಸಂಜೆ ಶಾಲೆಯಿಂದ ತನ್ನ ಮಲಾರ್ ನಲ್ಲಿರುವ ದೊಡ್ಡಮ್ಮನ ಮನೆಗೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಯುವಕರು ಬೆದರಿಸಿ
ಹಲ್ಲೆಗೈದು, ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ತಾಲೂಕು ಪಾವೂರು ಗ್ರಾಮದ ಮಲಾರ್ ಎಂಬಲ್ಲಿ ನಡೆದಿದೆ. ಈ ಬಗ್ಗೆ ಕೊಣಾಜೆ ಮಹಿಳಾ ಠಾಣೆಯಲ್ಲಿ ಆರೋಪಿ ಹಾಗೂ ಇನ್ನೋರ್ವನ ಮೇಲೆ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಬಾಲಕಿ ಅ. 16 ರಂದು ಸಂಜೆ ಶಾಲೆಯಿಂದ ತನ್ನ ದೊಡ್ಡಮ್ಮನ ಮನೆಗೆ ಹೋಗುತ್ತಿದ್ದ ವೇಳೆ ಮಲಾರ್ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಯುವಕರು ಬಾಲಕಿಯನ್ನು ತಡೆದು ಯಾರ ಸುದ್ದಿಗೆ ಯಾರು ಬರಬಾರದು ಜಾಗ್ರತೆಯಾಗಿರಿ ಎಂದು ಎಚ್ಚರಿಕೆ ನೀಡಿ ನಂತರ ಬಾಲಕಿಯ ಮೇಲೆ ಹಲ್ಲೆ ನಡೆಸಿರುತ್ತಾರೆ.
ಈ ವೇಳೆ ಬೈಕ್‌ನಲ್ಲಿದ್ದ ಹಿಂಬದಿ ಸವಾರ ಬಾಲಕಿಯ ಎರಡೂ ಕೈಗಳನ್ನು ಹಿಂದಕ್ಕೆ ಹಿಡಿದು, ನಂತರ ಒಂದು ಕೈಯಿಂದ ಬಾಯಿಯನ್ನು ಮುಚ್ಚಿರುತ್ತಾನೆ. ಈ ವೇಳೆ ಬೈಕ್ ಸವಾರ ಬಾಲಕಿಯ ಹೊಟ್ಟೆಭಾಗಕ್ಕೆ ಗುದ್ದಿ, ಹಲ್ಲೆ ಮಾಡಿದ್ದು, ಚಾಕುವಿನಿಂದ ಬಾಲಕಿಯ ಎರಡೂ ಕೈಗಳಿಗೆ ಚುಚ್ಚಿ ಗಾಯಮಾಡಿರುತ್ತಾನೆ. ನಂತರ ಬಾಲಕಿಯನ್ನು ಕೊಲ್ಲುವ ಉದ್ದೇಶದಿಂದ ಹೊಟ್ಟೆಗೆ ತಿವಿಯಲು ಪ್ರಯತ್ನಿಸಿದಾಗ ಬಾಲಕಿ ಹಲ್ಲೆಯಿಂದ ತಪ್ಪಿಸುವುದಕ್ಕಾಗಿ ಕೈಯಿಂದ ಚೂರಿಯನ್ನು ತಡೆದಿರುತ್ತಾರೆ. ಈ ಸಂದರ್ಭ ಹಿಂಬದಿ ಸವಾರ ಅಲ್ಲೇ ಇದ್ದ ಕೋಲಿನಿಂದ ಬಾಲಕಿಯ ಕಾಲಿಗೆ ಮತ್ತು ತಲೆಗೆ ಗಾಯಮಾಡಿರುತ್ತಾನೆ.
ಘಟನೆ ಬಗ್ಗೆ ಬಾಲಕಿ ನೀಡಿದ ದೂರಿನನ್ವಯ ಕೊಣಾಜೆ ಮಹಿಳಾ ಮಹಿಳಾ ಠಾಣೆಯಲ್ಲಿ ಆರೋಪಿ ಹಾಗೂ ಇನ್ನೋರ್ವನ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿರುತ್ತದೆ. ಈ ಬಗ್ಗೆ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) 2023 (U/s-126(2), 115(2), 118(1), 74,109,3(5): ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ-2012(U/s-7-8) ಪ್ರಕರಣ ದಾಖಲಾಗಿದೆ.