ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯನ್ನ ಏಕಮುಖ ರಸ್ತೆಯನ್ನಾಗಿ ಮಾಡಿರುವುದಕ್ಕೆ ಶಿವ ಭಕ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಮುಖ್ಯ ರಸ್ತೆಯಿಂದ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಮೂಲಕ ಒಳ ಪ್ರವೇಶಿಸುವ ರಸ್ತೆಯನ್ನ ಏಕಮುಖ ರಸ್ತೆಯನ್ನಾಗಿ ಮಾಡಿರುವ ಪೊಲೀಸರ ಕ್ರಮಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಪ್ರತೀ ಸೋಮವಾರದಂದು ಮುಖ್ಯ ರಸ್ತೆಯಿಂದ ದೇವಳದ ದ್ವಾರದ ಮೂಲಕ ಒಳ ಪ್ರವೇಶಿಸಬಹುದು. ಆದ್ರೆ ಅದೇ ರಸ್ತೆಯಲ್ಲಿ ನಿರ್ಗಮಿಸುವಂತಿಲ್ಲ. ಬದಲಾಗಿ ನೆಲ್ಲಿಕಟ್ಟೆ ಕೊಂಬೆಟ್ಟು ಮೂಲಕ ನಿರ್ಗಮಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಸುತ್ತು ಬಳಸಿ ಮತ್ತೆ ಮುಖ್ಯ ರಸ್ತೆಗೆ ಪ್ರವೇಶಿಸಬೇಕಿದೆ.
ಇದರಿಂದ ಕೆರಳಿರುವ ಭಕ್ತರು, ಇಲ್ಲಿನ ಪುತ್ತೂರು ಸಂಚಾರ ಪೊಲೀಸ್ ವಿಭಾಗ ದೇವಸ್ಥಾನಕ್ಕೆ ಪ್ರವೇಶ ಮತ್ತು ನಿರ್ಗಮನಕ್ಕೆ ಏಕಮುಖ ಸಂಚಾರ ಮಾಡಿ ದೇವಳದ ಗಮನಕ್ಕೂ ತರದೇ ಕಾನೂನು ಬಾಹಿರವಾಗಿ ಸೂಚನಾ ಫಲಕವನ್ನ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅದಲ್ಲದೇ ರಸ್ತೆಗೆ ತಾಗಿರುವಂತೆಯೇ ಏಕಮುಖ ಸಂಚಾರ ಎಂಬ ಸೂಚನಾ ಫಲಕವನ್ನ ಹಾಕಿರುವುದರಿಂದ ಅಲ್ಲಿ ವಾಹನ ಸವಾರರಿಗೂ ತೊಂದರೆ ಉಂಟಾಗಿದೆ.
ಇದನ್ನ ತಕ್ಷಣ ಪೊಲೀಸರು ತೆರವುಗೊಳಿಸಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ. ಇನ್ನು ನಾಲ್ಕು ವರ್ಷದ ಹಿಂದೆಯೇ ಇಂತಹ ಒಂದು ನಿಯಮವನ್ನ ತರಲಾಗಿತ್ತು. ಆದ್ರೆ ಅದು ಸಫಲತೆಯನ್ನ ಕಂಡಿಲ್ಲ. ಏಕಮುಖ ಸಂಚಾರ ಮಾಡುವುದರಿಂದ ಅದೆಷ್ಟೋ ಪ್ರಯಾಣಿಕರು ಸುತ್ತು ಬಳಸಿ ಮುಖ್ಯ ರಸ್ತೆಯನ್ನ ಸಂಪರ್ಕಿಸಬೇಕಾದ ಸ್ಥಿತಿಯನ್ನ ಪೊಲೀಸರು ಮಾಡಿದ್ದಾರೆ. ಇಷ್ಟೇ ಅಲ್ಲದೇ ಪೊಲೀಸರು ಸೂಚನಾ ಫಲಕ ಹಾಕುವ ಮುನ್ನ ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ತರಬೇಕಿದೆ. ಆದ್ರೆ ಇವರು ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೂ ತಾರದೇ ಏಕಾಏಕಿ ಏಕಮುಖ ಸಂಚಾರ ಮಾಡಿ ಹಲವಾರು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.