ಬಿಜೆಪಿ ಈಗಾಗಲೇ ಶಿಗ್ಗಾವಿ ಮತ್ತು ಸಂಡೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ್ದು, ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ಸಿಟ್ಟು ತರಿಸಿದೆ.
ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ಧ ಬಿಜೆಪಿ ಘಟಾನುಘಟಿ ನಾಯಕರು ರಾಷ್ಟ್ರಮಟ್ಟದಲ್ಲಿ ಟೀಕಿಸುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ ಬಿಜೆಪಿ ನಾಯಕರ ಮಕ್ಕಳಿಗೆ ಚುನಾವಣೆಯಲ್ಲಿ ಮಣೆ ಹಾಕುತ್ತಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷದ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿಯೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತದೆ ಎಂದು ಟೀಕಿಸುವ ಬಿಜೆಪಿಯವರು ಈಗ ಮಾತ್ರ ಹಿರಿಯ ನಾಯಕರ ಮಕ್ಕಳಿಗೆ ಟಿಕೆಟ್ ಕೊಡುತ್ತಿದ್ದಾರೆ. ಕಾರ್ಯಕರ್ತರು ಬರಿ ಜೈಕಾರ ಹಾಕುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಬಿಜೆಪಿ ತನ್ನ ಸಿದ್ಧಾಂತವನ್ನೇ ಮರೆತಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಿಗ್ಗಾವಿಯಲ್ಲಿ ಪಕ್ಷದ ಕಾರ್ಯಕರ್ತರು ಇಲ್ಲವಾ?
ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶಿಗ್ಗಾವಿ ಮತ್ತು ಸಂಡೂರು ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಕಾಮೆಂಟ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿಗ್ಗಾವಿ ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ನಿಷ್ಠಾವಂತ ಕಾರ್ಯಕರ್ತ ನಿಮಗೆ ಸಿಗಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ವಂಶವಾದ ಮತ್ತು ಪರಿವಾರವನ್ನು ದೂರವಿಡಿ ಎನ್ನುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದು ಸರಿಯಾದ ಬಳುವಳಿ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕುಟುಂಬ ರಾಜಕೀಯವಲ್ಲವಾ ಎಂದು ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಕೆಲವರು ಪ್ರಶ್ನೆ ಮಾಡಿದ್ದಾರೆ.
ನಾವು ಕಾಂಗ್ರೆಸ್‌ಗಿಂತ ವಿಭಿನ್ನ ಎಂದು ಹೇಗೆ ಹೇಳಿಕೊಳ್ಳುತ್ತೀರಿ, ಅಪ್ಪ ಮಕ್ಕಳು ಬಿಟ್ಟರೆ ಅಲ್ಲಿ ಬೇರೆ ಯಾರಿಗೂ ಟಿಕೆಟ್ ಪಡೆಯುವ ಅರ್ಹತೆ ಇಲ್ಲವಾ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಥಳೀಯರಾದ ಯೋಗೀಶ್ವರ್ ಅವರಿಗೆ ಟಿಕೆಟ್ ಕೊಡಬೇಕು, ಓಲೈಕೆ ಮಾಡಲು ಹೊರಗಿನವರಿಗೆ ಟಿಕೆಟ್ ಕೊಟ್ಟರೆ ಕಾರ್ಯಕರ್ತರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಹೇಳಿದರು. ಇನ್ನೂ ಕೆಲವರು ಎಸ್‌ಆರ್ ಬೊಮ್ಮಾಯಿ ಮಗ ಬಸವರಾಜ ಬೊಮ್ಮಾಯಿ, ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಹೀಗೆ ನಿಮ್ಮ ಕುಟುಂಬದವರೇ ರಾಜಕಾರಣ ಮಾಡಿಕೊಂಡಿರಿ. ಪಕ್ಷಕ್ಕಾಗಿ ಹಗಲಿರುಳು ದುಡಿಯುವ ಕಾರ್ಯಕರ್ತರು ನಿಮಗೆ ಜೈಕಾರ ಹಾಕಿಕೊಂಡೇ ಇರಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.