ದಕ್ಷಿಣಕನ್ನಡ: ತುಳುನಾಡಿನಲ್ಲಿ ಪತ್ತೆನಾಜೆ ಬಳಿಕ ದೈವಗಳ ನೇಮ ಹಾಗು ಕೋಲಗಳ ಆಚರಣೆ ದೀಪಾವಳಿವರೆಗೆ ನಿಲ್ಲುತ್ತವೆ. ಆ ಸಮಯದಲ್ಲಿ ತುಳುನಾಡಿನ ಜನ ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ ಈ ಸಮಯದಲ್ಲಿ ತುಳುನಾಡಿನ ಕೆಲವು ಪ್ರಧಾನ ರಾಜನ್ ದೈವಗಳಿಗೆ ಹೊಸ ಅಕ್ಕಿ ಸೇವೆ ನಡೆಯುತ್ತದೆ. ಗದ್ದೆಯಲ್ಲಿ ಬೆಳೆದ ಪೈರನ್ನು ಮನೆ ತುಂಬಿಸುವುದಕ್ಕೆ ಹೊಸಕ್ಕಿ ಊಟ ಎಂದು ಕರೆಯಲಾಗುತ್ತಿದ್ದು, ಇದೇ ಆಚರಣೆಯನ್ನು ಪ್ರಧಾನ ದೈವಗಳ ದೈವಸ್ಥಾನಗಳಲ್ಲೂ ನಡೆಯುತ್ತದೆ.
ತುಳುನಾಡಿನಲ್ಲಿ ಪತ್ತನಾಜೆಯ ಬಳಿಕ ದೀಪಾವಳಿ ತನಕ ಯಾವುದೇ ದೈವಗಳಿಗೆ ಪೂರ್ಣ ಪ್ರಮಾಣದ ನೇಮ-ಕೋಲಗಳು ನಡೆಯುವ ಸಂಪ್ರದಾಯವಿಲ್ಲ. ಆದರೆ ಪ್ರಧಾನ ದೈವಗಳೆಂದು ಗುರುತಿಸಲ್ಪಡುವ ರಾಜನ್ ದೈವಗಳಿಗೆ ಪತ್ತನಾಜೆ ಮುಗಿಯುವ ಮೊದಲೇ ಹೊಸ ಅಕ್ಕಿ ಸೇವೆಯ ನೇಮೋತ್ಸವ ನಡೆಯುತ್ತದೆ. ಇಂತಹುದೇ ಒಂದು ನೇಮೋತ್ಸವ ದಕ್ಷಿಣಕನ್ನಡ ಜಿಲ್ಲೆಯ ಪಡುಮಲೆಯ ಕಿನ್ನಿಮಾನಿ-ಪೂಮಾಣಿ ದೈವಸ್ಥಾನದಲ್ಲೂ ನಡೆಯುತ್ತದೆ.
ಈ ದೈವಸ್ಥಾನದ ಪ್ರಧಾನ ದೈವವಾದ ಪಿಲಿ ಚಾಮುಂಡಿ (ವ್ಯಾಘ್ರ ಚಾಮುಂಡಿ ) ಗೂ ಇದೇ ರೀತಿಯ ಹೊಸಕ್ಕಿ ನೇಮೋತ್ಸವ ನಡೆಯುತ್ತದೆ. ತುಳುನಾಡಿನ ಅತ್ಯಂತ ಪ್ರಭಾವಿ ದೈವವಾದ ಪಿಲಿ ಚಾಮುಂಡಿ ದೇವಿಗೆ ಅಪಾರ ಸಂಖ್ಯೆಯ ಭಕ್ತಾಧಿಗಳಿದ್ದು, ಹೊಸಕ್ಕಿ ಸೇವೆ ನಡೆಯುವ ಸಮಯದಲ್ಲಿ ಭಾರೀ ಸಂಖ್ಯೆಯ ಜನ ಈ ಸೇವೆಯಲ್ಲಿ ಭಾಗವಹಿಸುತ್ತಾರೆ.
ತುಳುನಾಡಿನಲ್ಲಿ ನೇಮೋತ್ಸವ ನಡೆಯುವ ನೇಮೋತ್ಸವದಲ್ಲಿ ಯಾವ ರೀತಿಯ ಕಟ್ಟು-ಕಟ್ಟಲೆ, ಸಂಪ್ರದಾಯಗಳನ್ನು ಪಾಲಿಸಲಾಗುತ್ತದೋ, ಅದೇ ರೀತಿಯ ಸಂಪ್ರದಾಯವನ್ನು ಈ ಹೊಸಕ್ಕಿ ನೇಮೋತ್ಸವವನ್ನೂ ನಡೆಸಲಾಗುತ್ತದೆ. ಪಡುಮಲೆಯ ಕಿನ್ನಿಮಾನಿ-ಪೂಮಾಣಿ ದೈವಸ್ಥಾನದಲ್ಲಿರುವ ದೈವಗಳಿಗೆ ಸೇರಿದ ಮುಖವಾಡ, ಕತ್ತಿಗಳನ್ನು ನೇಮೋತ್ಸವದ ದಿನ ಹೊರಗೆ ತೆಗೆಯಲಾಗುತ್ತದೆ. ಆ ಬಳಿಕ ದೈವ ನರ್ತಕರು ದೈವಗಳಿಗೆ ಬಣ್ಣ ಹಚ್ಚಿ, ಗಗ್ಗರ ಇಟ್ಡು ನರ್ತನ ಸೇವೆಯನ್ನು ನೆರವೇರಿಸಲಾಗುತ್ತದೆ.