ಪುತ್ತೂರು : ಕಳೆದ ಹಲವು ವರ್ಷಗಳಿಂದ ವಿವಾದದಲ್ಲಿರುವ ಪುತ್ತೂರು-ಉಪ್ಪಿನಂಗಡಿ ರಸ್ತೆಯ ದಾರಂದಕುಕ್ಕು ಎಂಬಲ್ಲಿರುವ ಪ್ರಯಾಣಿಕರ ತಂಗುದಾಣ ಮತ್ತೆ ಮುನ್ನಲೆಗೆ ಬಂದಿದೆ. ತಂಗುದಾಣದ ಬಗ್ಗೆ ದೂರು ಬಂದಿರುವ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ನೇತೃತ್ವದಲ್ಲಿ ಮತ್ತೆ ಈ ತಂಗುದಾಣ ಪರಿಶೀಲಿಸಲು ಅಧಿಕಾರಿಗಳ ತಂಡ ಭೇಟಿ ನೀಡಿದೆ.
ಅಫಘಾತ ನಡೆಯುವ ಸ್ಥಳವೆಂದು ಸಾರ್ವಜನಿಕರ ಹೆಸರಿನಲ್ಲಿ ಸರಕಾರಕ್ಕೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಈ ತಂಗುದಾಣವನ್ನು ಮತ್ತೆ ಅಧಿಕಾರಿಗಳ ತಂಡ ಪರಿಶೀಲಿಸಿದೆ.ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ-ಪುತ್ತೂರು ಸಂಪರ್ಕ ರಸ್ತೆಯ ದಾರಂದಕುಕ್ಕು ಎಂಬಲ್ಲಿ ಮುಖ್ಯರಸ್ತೆ ಬದಿಯಲ್ಲಿರುವ ಪ್ರಯಾಣಿಕರ ತಂಗುದಾಣವು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕ ದೂರಿನಲ್ಲಿ ಹಿನ್ನೆಲೆಯಲ್ಲಿ ಅಧಿಕಾರಿಗಳ ತಙಡ ಇಲ್ಲಿಗೆ ಭೇಟಿ ನೀಡಿದೆ.
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರರವರು ಕಂದಾಯ ಇಲಾಖೆ, ಭೂ ಮಾಪನಾ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ಸಹಾಯಕ ಆಯುಕ್ತರು, ಪ್ರಯಾಣಿಕರ ತಂಗುದಾಣದ ಬಗ್ಗೆ ಸರಕಾರಕ್ಕೆ ಸಾರ್ವಜನಿಕ ದೂರು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ.
ದೂರಿನ ಬಗ್ಗೆ ಮಾಹಿತಿ ಪಡೆಯಲು ಸ್ಥಳ ತನಿಖೆ ನಡೆಸಲಾಗುತ್ತಿದೆ. ತಂಗುದಾಣವನ್ನು ತೆರವುಗೊಳಿಸುವುದಿಲ್ಲ. ಅದರ ಬಗ್ಗೆ ಚಿಂತೆ ಬೇಡ. ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಸ್ಪಷ್ಟಪಡಿಸಿದ್ದಾರೆ. ಅಪಘಾತ ಸ್ಥಳವೇ ಅಲ್ಲದಿದ್ದರೂ ದೂರುದಾರರು ಅಪಘಾತ ಸ್ಥಳವೆಂದು ಉಲ್ಲೇಖ ಮಾಡಿದ್ದಾರೆ. ಇಲ್ಲಿನ ವಿವಾದ ಇದೇ ಮೊದಲಲ್ಲ. ಕಳದೆ ಹಲವು ವರ್ಷಗಳಿಂದ ನಡೆಯುತ್ತಿದ್ದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಇದಕ್ಕೊಂದು ಅಂತ್ಯ ಕಾಣಬೇಕು ಎಂದಿದ್ದಾರೆ.
ಕಳೆದ ಹಲವು ವರ್ಷಗಳ ಹಿಂದೆ ಬಸ್ ನಿಲ್ದಾಣ ಆಗಬೇಕು ಎಂಬ ಬೇಡಿಕೆಯಿತ್ತು. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಹಳೆಯ ಬಸ್ ನಿಲ್ದಾಣ ತೆರವುಗೊಳಿಸಲಾಗಿತ್ತು. ಹೊಸ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಮನವಿ ಮಾಡಿದ್ದು 5 ಲಕ್ಷ ರೂಪಾಯಿ ಅನುದಾನದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಿತ್ತು. ಕೆಲವು ವ್ಯಕ್ತಿಗಳು ತಮ್ಮ ಲಾಭಕ್ಕಾಗಿ ತಪ್ಪು ಮಾಹಿತಿ ನೀಡಿ ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ಮೂಲಕ ಬಸ್ ನಿಲ್ದಾಣ ತೆರವುಗೊಳಿಸಲು ತೊಂದರೆ ನೀಡುತ್ತಿದ್ದಾರೆ. ಈ ಹಿಂದಿನ ಜಿಲ್ಲಾಧಿಕಾರಿಗಳು ಸಮಿತಿ ರಚಿಸಿ ಸ್ಥಳ ಪರಿಶೀಲನೆ ನಡೆಸಿ ಬಸ್ ನಿಲ್ದಾಣಕ್ಕೆ ಇದೇ ಸೂಕ್ತ ಸ್ಥಳವೆಂದು ವರದಿ ನೀಡಿದ್ದರು.
ಇದೀಗ ಸಹಾಯಕ ಆಯಕ್ತರು ಪರಿಶೀಲನೆ ನಡೆಸಿದ್ದು ಅವರಿಗೂ ಮನವರಿಕೆಯಾಗಿದೆ. ಸಮಾಜಕ್ಕೆ ಪೂರಕವಾದ ಕೆಲಸ ಮಾಡುವಾಗ ಒಂದಿಬ್ಬರು ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಸುಮಾರು 5 ಸಾವಿರ ಮಂದಿಗೆ ಪ್ರಯೋಜನವಾಗುವ ಬಸ್ ನಿಲ್ದಾಣವಾಗಿದೆ ಎನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ.ವಿವಾದಿತ ಬಸ್ ನಿಲ್ದಾಣದ ಪಕ್ಕದಲ್ಲೇ ಮನೆಯೊಂದಿದ್ದು, ಈ ಮನೆ ಮಂದಿ ಮತ್ತು ಸ್ಥಳೀಯ ಗ್ರಾಮಪಂಚಾಯತ್ ಆಡಳಿತದ ನಡುವೆ ನಡೆಯುತ್ತಿರುವ ಈ ವಿವಾದ ಇದೀಗ ಸರಕಾರದ ಮಟ್ಟಕ್ಕೂ ಹೋಗುವ ಮೂಲಕ ಸುದ್ದಿಯಲ್ಲಿದೆ