ಉಡುಪಿ: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿವಾದಕ್ಕೆ ಸಂಬಂಧಿಸಿ ಕಡೆಗೂ ನಕಲಿ ಮೂರ್ತಿ ತಯಾರಿಸಿದ ಶಿಲ್ಪಿ ಕೃಷ್ಣನಾಯಕ್ ಅವರನ್ನು ಬಂಧಿಸಲಾಗಿದೆ. ಉಡುಪಿ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಬೆನ್ನಲ್ಲೇ ಕಾರ್ಕಳ ನಗರ ಠಾಣೆ ಪೋಲಿಸರು ತಲೆಮರಿಸಿಕೊಂಡಿದ್ದ ಆರೋಪಿಯನ್ನು ಕೇಂದ್ರಾಡಳಿತ ಪ್ರದೇಶ ಮಾಹೆಯಲ್ಲಿ ಬಂಧಿಸಿದ್ದಾರೆ.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಮುತುವರ್ಜಿಯಲ್ಲಿ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಲಾಗಿತ್ತು. ಸುಮಾರು ಹನ್ನೊಂದು ಕೋಟಿ ವೆಚ್ಚದ ಯೋಜನೆಯಲ್ಲಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿದ್ದು ಬಾರಿ ವಿವಾದಕ್ಕೆ ಕಾರಣವಾಗಿತ್ತು. ಕಳೆದ ಅಸೆಂಬ್ಲಿ ಚುನಾವಣೆಗೂ ಮುನ್ನ ತರಾತುರಿಯಲ್ಲಿ ಥೀಮ್ ಪಾರ್ಕನ್ನು ಉದ್ಘಾಟನೆ ಮಾಡಲಾಗಿತ್ತು. ಶಾಸಕರ ಸೂಚನೆಯಂತೆ ಉಡುಪಿ ನಿರ್ಮಿತಿ ಕೇಂದ್ರದವರು ಅರೆಬರೆ ಕಾಮಗಾರಿ ನಡೆಸಿ ಯೋಜನೆ ಲೋಕಾರ್ಪಣೆಗೆ ಬಿಟ್ಟುಕೊಟ್ಟಿದ್ದರು.
ಉದ್ಘಾಟನೆಗೊಂಡ ಎರಡೇ ತಿಂಗಳಲ್ಲಿ ಥೀಮ್ ಪಾರ್ಕ್ ವಿವಾದಕ್ಕೀಡಾಗಿದ್ದು ನಕಲಿ ಪರಶುರಾಮನ ಮೂರ್ತಿ ಎಂದು ಸುದ್ದಿ ಹರಡಿತ್ತು.
ಕಾಂಗ್ರೆಸ್ ಕಾರ್ಯಕರ್ತರು ಮೂರ್ತಿಯನ್ನು ಒಡೆದು ತೋರಿಸಿ, ಇದು ಕಂಚಿನದ್ದಲ್ಲ ಫೈಬರ್ ಮೂರ್ತಿ ಎಂದು ವಿಡಿಯೋ ಮಾಡಿದ್ದು ಶಾಸಕ ಸುನಿಲ್ ಕುಮಾರ್ ಗೆ ಮಂಗಳಾರತಿ ಮಾಡಿದಂತಾಗಿತ್ತು. ಬಲಿಕ ಮೂರ್ತಿಯನ್ನು ಅರ್ಧಕ್ಕೆ ತೆರವುಗೊಳಿಸಿ, ಥೀಮ್ ಪಾರ್ಕ್ ಎಂಟ್ರಿಯನ್ನೇ ಸ್ಥಗಿತಗೊಳಿಸಲಾಗಿತ್ತು.
ಬುಡದಲ್ಲಿ ಮಾತ್ರ ಉಳಿಸಿಕೊಂಡು ಮೇಲ್ಭಾಗದಲ್ಲಿ ಎಬ್ಬಿಸಿದ್ದು ಮೊದಲಿದ್ದ ಮೂರ್ತಿ ನಕಲಿ ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ತೀವ್ರ ರಾಜಕೀಯ ಗೊಂದಲ ಎದ್ದಿದ್ದರೂ, ರಾಜ್ಯ ಕಾಂಗ್ರೆಸ್ ಸರಕಾರ ಪರಿಶೀಲನೆ ಮುಂದಾಗದೆ ಒಟ್ಟು ಘಟನೆಯ ಬಗ್ಗೆ ನಿರ್ಲಕ್ಷ ವಹಿಸಿದ್ದು ಶಾಸಕ ಸುನಿಲ್ ಕುಮಾರ್ ಅವರನ್ನು ಪಾರು ಮಾಡುವ ಯತ್ನವು ನಡೆದಿತ್ತು. ಇದರಿಂದಾಗಿ ಕಾರ್ಕಳ ಕಾಂಗ್ರೆಸ್ಸಿಗರ ಹೋರಾಟ ವ್ಯರ್ಥ ಪ್ರಲಾಪ ಎನ್ನುವಂತಾಗಿತ್ತು. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಬಂದು ಪರಿಶೀಲನೆಯ ಭರವಸೆ ನೀಡಿದರು ಯಾವುದೇ ಪರಿಣಾಮ ಬೀರಿರಲಿಲ್ಲ .
ಕೃಷ್ಣ ಆರ್ಟ್ ಸಂಸ್ಥೆಯ ಶಿಲ್ಪಿ ಕೃಷ್ಣ ನಾಯಕ್ ಪರಶುರಾಮನ ಕಂಚಿನ ಮೂರ್ತಿ ತಯಾರಿಗೆಂದು ಉಡುಪಿ ನಿರ್ಮಿತಿ ಕೇಂದ್ರದಿಂದ 1.25. ಕೋಟಿ ರೂಪಾಯಿ ಹಣ ಪಡೆದುಕೊಂಡಿದ್ದರು ಎನ್ನಲಾಗಿದೆ. ಆದರೆ ಕಂಚಿನ ವಿಗ್ರಹ ತಯಾರಿಸದೆ ನಕಲಿ ಮೂರ್ತಿ ನಿರ್ಮಿಸಿಕೊಟ್ಟು ಸರಕಾರಕ್ಕೆ ವಂಚನೆಸಗಿದ್ದಾರೆಂದು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಿಂದ ಪ್ರಕರಣ ಮೂಲ ಪಾತ್ರಧಾರಿ ಶಿಲ್ಪಿಯ ಕೊರಳು ಸುತ್ತಿಕೊಂಡಿದ್ದರಿಂದ, ಇದರಲ್ಲಿ ತನ್ನದೇನು ತಪ್ಪಿಲ್ಲ ಎಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಪ್ರಕರಣ ರದ್ದುಪಡಿಸಲು ಮುಂದಾಗಿದ್ದರು. ಆದರೆ ಹೈಕೋರ್ಟ್ ಅರ್ಜಿ ವಜಾಗೊಳಿಸಿದ್ದಲ್ಲದೆ, ಕಂಚಿನ ಪ್ರತಿಮೆ ಅಲ್ಲ ಎಂದ ಮೇಲೆ ನೀವು ಹೇಗೆ ಮೂರ್ತಿ ನಿರ್ಮಿಸಿದ್ರಿ ಎನ್ನುವ ಬಗ್ಗೆ ತನಿಖೆ ಆಗಬೇಕಲ್ಲವೇ ..?
ಸರಕಾರದ ದುಡ್ಡು ಹೊಡೆದಿದ್ದಕ್ಕೆ ಯಾರು ಜವಾಬ್ದಾರಿ ಎಂದು ಪ್ರಶ್ನೆ ಮಾಡಿತ್ತು.
ಆಗಸ್ಟ್ 21ರಂದು ಹೈಕೋರ್ಟ್ ಅರ್ಜಿ ವಜಾ ಗೊಳಿಸಿದ ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಕೋರಿ ಶಿಲ್ಪಿ ಕೃಷ್ಣ ನಾಯಕ್, ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅಲ್ಲಿಯೂ ಜಾಮಿೀನು ಸಿಗದ ಕಾರಣ ಕಾರ್ಕಳ ಪೊಲೀಸರು ಇದೀಗ ಶಿಲ್ಪಿಯನ್ನು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆ ಎಬ್ಬಿಸಲಾದ ಪರಶುರಾಮನ ವಿಗ್ರಹದ ಭಾಗಗಳನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದ್ದು, ಅವನ್ನು ಕಾರ್ಕಳ ನಗರ ಠಾಣೆಯಲ್ಲಿ ಇರಿಸಲಾಗಿದೆ. ಸೊಂಟದ ಕೆಳಗಿನ ಭಾಗ ಥೀಮ್ ಪಾರ್ಕ್ ನಲ್ಲಿ ಇದ್ದರೆ, ಮೇಲ್ಭಾಗವನ್ನು ನಿರ್ಮಿತಿ ಕೇಂದ್ರದವರೇ ಕಾಮಗಾರಿ ಸಲುವಾಗಿ ಎಬ್ಬಿಸಿದ್ದರು. 2023ರ ಆಗಸ್ಟ್ 13ರಂದು ರಾತ್ರೋರಾತ್ರಿ ಶಾಸಕ ಸುನಿಲ್ ಕುಮಾರ್ ಉಸ್ತುವಾರಿಯಲ್ಲೆ ಪೊಲೀಸರ ಸರ್ಪಗಾವಲಿನೊಂದಿಗೆ ವಿಗ್ರಹವನ್ನು ತೆರವು ಮಾಡಿದ ವಿಡಿಯೋ ವೈರಲ್ ಆಗಿತ್ತು. ನಕಲಿ ಮೂರ್ತಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿದ್ದು, ಇದೀಗ ಶಿಲ್ಪಿ ಬಂಧನ ಆಗುವುದರೊಂದಿಗೆ ಪೊಲೀಸರು ಸೂಕ್ತ ತನಿಖೆ ನಡೆಸಿದರೆ ಇದಕ್ಕೆಲ್ಲ ಉತ್ತರ ಸಿಗಬಹುದು.