ದೇಶದ ಭದ್ರತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ನರೇಂದ್ರ ಮೋದಿಯವರು ಮೂರನೇ ಭಾರಿಗೆ ಪ್ರಧಾನಿಯಾಗಬೇಕಾದ ಅನಿವಾರ್ಯತೆಯಿದೆ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆ ಅತಿ ಮಹತ್ವದ್ದು, ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲು ವಿರೋಧ ಪಕ್ಷಗಳು ಒಗ್ಗೂಡಿದ್ದು, ಕಾಂಗ್ರೆಸ್ ಪಕ್ಷವು SDPI ಹಾಗೂ PFIಯಂತಹ ರಾಷ್ಟ್ರವಿರೋಧಿ ಸಂಘಟನೆಗಳೊಂದಿಗೆ ಕೈಜೋಡಿಸಿದೆ ಎಂದು ಮಾಜಿ ಸಚಿವ ಬಿ.ನಾಗರಾಜ ಶಟ್ಟಿ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ನೆಲೆಯಾಗಿದ್ದು, ಸತತ ಮೂರು ದಶಕಗಳಿಂದ ಭಾರತೀಯ ಜನತಾ ಪಾರ್ಟಿ ಗೆಲ್ಲುತ್ತಿರುವ ಕಾರಣ ಕಾಂಗ್ರೆಸ್ ಪಕ್ಷವು ಜಾತಿ-ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದೆ, ರಾಷ್ಟ್ರವಿರೋಧಿ ನಿರ್ಬಂಧಿತ ಸಂಘಟನೆಗಳೊಂದಿಗೆ ಕೈಜೋಡಿಸಿ ಷಡ್ಯಂತರದಿಂದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ನಿರತವಾಗಿದೆ. ಕೆಲ ಸ್ಥಳೀಯ ಸಂಘಟನೆಗಳೊಂದಿಗೆ ಸೇರಿ ಚುನಾವಣೆಯಲ್ಲಿ ನೋಟ ಚಲಾಯಿಸಲು ಕೂಡ ಪ್ರೇರೇಪಿಸುತ್ತಿದ್ದು, ಕಾಂಗ್ರೆಸ್ ಪಕ್ಷ ಮತದಾರರ ದಿಕ್ಕುತಪ್ಪಿಸುವ ಮೂಲಕ ಮತದಾರನ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿದೆ ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ 500ವರ್ಷಗಳ ಭಾರತೀಯರ ಕನಸನ್ನು ನನಸಾಗಿಸುವಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವವಹಿಸಿ ಯಶಸ್ವಿಯಾಗಿದೆ. ಇನ್ನೇನಿದ್ದರು ರಾಮರಾಜ್ಯ ನಿರ್ಮಾಣದ ಕಲ್ಪನೆಯ ಆಡಳಿತವನ್ನು ನೀಡುವ ಶಕ್ತಿ ಹಾಗೂ ಬದ್ದತೆಯಿರುವ ನರೇಂದ್ರ ಮೋದಿಯವರನ್ನು ಮೂರನೇ ಭಾರಿಗೆ ಪ್ರಧಾನಿಯಾಗಿಸುವ ಸಂಕಲ್ಪದೊಂದಿಗೆ ಚುನಾವಣೆಯಲ್ಲಿ 400 ಕ್ಷೇತ್ರಗಳನ್ನು ಗೆಲ್ಲುವ ಗುರಿತಲುಪುವ ವಿಶ್ವಾಸದೊಂದಿಗೆ ತೊಡಗಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಸೈನಿಕರಾಗಿ ಕರ್ತವ್ಯ ನಿರ್ವಹಿಸಿದ್ದು, ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿದ್ದಾರೆ, ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಹಗಲು-ರಾತ್ರಿ ಶ್ರಮವಹಿಸಿ ಪ್ರಚಾರದಲ್ಲಿ ತೊಡಗಿದ್ದು, ಚುನಾವಣೆಯಲ್ಲಿ ಮತದಾರರನ್ನು ಪ್ರೇರೇಪಿಸಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿಸಲು ಕಾರ್ಯಕರ್ತರು ಶ್ರಮವಹಿಸುತ್ತಿದ್ದಾರೆ, ನಮ್ಮ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ಗೆಲುವಿನ ಅಂತರ ಹೆಚ್ಚಿಸಲು ಶ್ರಮವಹಿಸುವುದಾಗಿ ಹೇಳಿದ್ದಾರೆ.