ಮಂಗಳೂರು : ಕಾಂತಾರ ಸಿನಿಮಾ ಮಾದರಿಯಲ್ಲಿ, ಮಂಗಳೂರು ಎಸ್ ಇ ಝಡ್ ಸಂಸ್ಥೆಯು ತುಳುನಾಡಿನ ಪ್ರಧಾನವಾದ ದೈವಾರಾಧನೆಗೆ ತಡೆಯೋಡ್ಡಿದೆ ಎಂಬ ಆರೋಪ ಭಕ್ತರಿಂದ ಕೇಳಿಬಂದಿದೆ .
ಸುಮಾರು 800 ವರ್ಷಗಳ ಇತಿಹಾಸ ಇರುವ ಮಂಗಳೂರು ಹೊರವಲಯದ ಬಜೆಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನದ ಜಾಗವು, ಸದ್ಯ ಎಸ್ ಇ ಝಡ್ ಒಳಗೆ ಇರುವುದರಿಂದ, ಮುಂದಕ್ಕೆ ದೈವಕ್ಕೆ ದೀಪ, ಹೂವು, ನೀರು ಇಡಲು ಅವಕಾಶ ಇಲ್ಲ ಎಂದು ಹೇಳುವ ಮೂಲಕ ಎಸ್ ಇ ಝಡ್ ಹೊಸ ವಿವಾದ ಸೃಷ್ಟಿಸಿದೆ.
ನೆಲ್ಲಿದಡಿಗುತ್ತಿನವರು ಹಾಗೂ ಸ್ಥಳೀಯರು ಎಸ್ ಇ ಝಡ್ ಅಧಿಕಾರಿಗಳ ಗಮನಕ್ಕೆ ತಂದು, ಈ ದೇವಸ್ಥಾನದಲ್ಲಿ ಸೇವಾ ಕಾರ್ಯದಲ್ಲಿ ಭಾಗವಹಿಸುವುದು ಕ್ರಮ. ಫೆ. 12ರಂದು ಸಂಕ್ರಮಣ ಸೇವೆ ಮಾಡಲು ತೆರಳಲು ಮನವಿ ಪತ್ರ ನೀಡುವ ವೇಳೆ ಇದು ಕೊನೆಯ ಅವಕಾಶ, ಮುಂದೆ ಅವಕಾಶ ಇಲ್ಲ ಎಂದು ಎಸ್ ಇ ಝಡ್ ಅಧಿಕಾರಿಗಳು ತಿಳಿಸಿದ್ದಾರೆ. ಇದು ಭಕ್ತಾದಿಗಳ ಆಕ್ಷೇಪಕ್ಕೆ ಕಾರಣವಾಗಿದೆ.
ವಿವಾದವೇನು?
ಮಂಗಳೂರು ಎಸ್ ಇ ಝಡ್ ಕಂಪನಿಯು ಭೂಸ್ವಾಧೀನದ ವೇಳೆ ನೆಲ್ಲಿದಡಿ ಗುತ್ತಿನ 22 ಮನೆಗಳ ಸ್ಥಳಾಂತರ ಮಾಡಲು ಮನವೊಲಿಸುವ ಸಂದರ್ಭ ಸ್ಥಳ ಮಹಿಮೆಯನ್ನು ಹೊಂದಿದ್ದ ದೈವ ಕಾಂತೇರಿ ಜುಮಾದಿ ಸ್ಥಾನವನ್ನು ಅಲ್ಲೇ ಉಳಿಸುವ ಬಗ್ಗೆ ನಿರ್ಧಾರವಾಗಿತ್ತು. ದೈವಕ್ಕೆ ನಿತ್ಯ ದೀಪ, ಹೂವು ನೀರು ಸಮರ್ಪಣೆ, ಸಂಕ್ರಮಣ, ದೀಪಾವಳಿ, ಚೌತಿ, ಅಷ್ಟಮಿ, ಬಂಡಿ ಉತ್ಸವ ನೇಮ ಸಹಿತ ವಿವಿಧ ಸಂದರ್ಭ ದೈವದ ಕಾರ್ಯಕ್ಕೆ ಕಾಂತೇರಿ ಜುಮಾದಿ ಸ್ಥಾನಕ್ಕೆ ಹೋಗಿ ಬರಲು ಆವಕಾಶ ನೀಡುವ ಬಗ್ಗೆ ಆಗ ತೀರ್ಮಾನಿಸಲಾಗಿತ್ತು. 2016ರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಇಂತಹುದೇ ತೀರ್ಮಾನ ಮಾಡಲಾಗಿತ್ತು. ಅದರಂತೆ ಅಧಿಕಾರಿಗಳ ಅನುಮತಿ ಪಡೆದು ಪೂಜಾ ಕಾರ್ಯ ನಡೆಸಲಾಗುತ್ತಿತ್ತು.
ಸುಮಾರು 800 ವರ್ಷಗಳ ಇತಿಹಾಸ ಇರುವ ತುಳುನಾಡಿನ ಕಾರಣಿಕ ಶಕ್ತಿ.
2006ರಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಸರಕಾರದಿಂದ ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ, ಕಳವಾರು ಗ್ರಾಮದ ಸಾವಿರಾರು ಎಕ್ರೆ ಪ್ರದೇಶ ಭೂಸ್ವಾಧೀನವಾಗಿತ್ತು. ಸಮೃದ್ಧ ಗದ್ದೆಗಳು, ಸಾವಿರಾರು ನಾಗಬನಗಳು, ಬ್ರಹ್ಮ ಸ್ಥಾನಗಳು, ದೈವದ ಗುಡಿಗಳು, ಕೆರೆ, ತೊರೆ, ಶಾಲೆ, ಚರ್ಚು, ಮಸೀದಿ, ಸಾವಿರಾರು ಮನೆಗಳು ಭೂ ಸ್ವಾಧೀನಕ್ಕೆ ನೆಲಸಮವಾಗಿತ್ತು. ಆದರೆ 800 ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿಗುತ್ತಿನ ದೈವಸ್ಥಾನವನ್ನು ಮುಟ್ಟಲಾಗಲಿಲ್ಲ. ನೆಲ್ಲಿದಡಿಗುತ್ತಿನ ಪೂರ್ತಿ ಜಾಗವನ್ನು ಕಂಪನಿ ಬರೆಸಿಕೊಂಡರು ದೈವಸ್ಥಾನವನ್ನು ತೆರೆವು ಮಾಡಲು ಆಗಲಿಲ್ಲ. ” ಯಾವುದೇ ಕಾರಣಕ್ಕೂ ಈ ಮಣ್ಣನ್ನು ನಾನು ಬಿಡುವುದಿಲ್ಲ ” ಹಿಂದೂ ದೈವ ನುಡಿದ ಕಾರಣ ಸಾವಿರಾರು ಎಕ್ರೆ ಕೈಗಾರಿಕಾ ಪ್ರದೇಶದಲ್ಲಿ ಕಾಂತೇರಿ ಜುಮಾದಿ ದೈವದ ದೈವಸ್ಥಾನವು ಈಗಲೂ ಇದೆ..
ಈ ಕ್ಷೇತ್ರದಲ್ಲಿನ ಬಾವಿ ಅತ್ಯಂತ ಪವಿತ್ರ ಎಂಬ ನಂಬಿಕೆ ಈಗಲೂ ಇದೆ.
ವಿಷಕ್ಕೆ ಮದ್ದು ನೀಡುವ ಶಕ್ತಿಯಿರುವ ಬಾವಿಯೆಂದು ಎಂಬುದು ಇತಿಹಾಸ. ದೈವಸ್ಥಾನವನ್ನು ಸ್ಥಳಾಂತರಿಸುವುದಿದ್ದರೆ ಈ ಬಾವಿಯನ್ನು ಸ್ಥಳಾಂತರಿಸಬೇಕು ಎಂಬುದು ದೈವದ ನುಡಿಯಾಗಿದೆ.
ಪ್ರತಿಭಟನೆಗೆ ಸಜ್ಜು.
ದೈವಾರದಾನೆಗೆ ಆಕ್ಷೇಪ ಮಾಡಿದ್ದನ್ನು ದೈವಾರಾಧಕರು ಮತ್ತು ಸಹಸ್ರಾರು ಭಕ್ತರು ಆಕ್ಷೇಪಿಸಿದ್ದು ಸ್ಥಳೀಯವಾಗಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈ ವಿಚಾರ ವಿವಿಧ ಕಡೆಗಳಲ್ಲಿ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಮೀನಾಕ್ಷಿ ಶೇರಾವತ್ ಅವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಕ್ಷೇತ್ರದ ಉಳಿವಿಗೆ ಎಲ್ಲರೂ ಜೊತೆಯಾಗಿ ನಿಂತು ಪ್ರತಿಭಟಿನೆ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.