ಪುತ್ತೂರು: ಅಂತರ, ಪರಿಸರ ಉಳಿವು, ಪಟ್ಟಣಕ್ಕೆ ಪೂರಕ ಎಂಬ ಮೂರು ವಿಷಯಗಳನ್ನು ಮುಂದಿಟ್ಟುಕೊಂಡು, ಕಾಂಞಗಾಡ್ – ಕಾಣಿಯೂರು ರೈಲ್ವೆ ಮಾರ್ಗಕ್ಕೆ ಬದಲಾಗಿ ಹೊಸ ಮಾರ್ಗದ ಪ್ರಸ್ತಾವನೆಯನ್ನು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ತಜ್ಞರ ಸಮಿತಿ ತಯಾರಿಸಿದೆ.
ಪ್ರಸ್ತುತ ಕಾಂಞಿಗಾಡ್- ಕಾಣಿಯೂರು ಮಾರ್ಗದ ಪ್ರಸ್ತಾವನೆ ರೈಲ್ವೇ ಇಲಾಖೆ ಮುಂದಿದೆ. ಈ ಯೋಜನೆ ಪೂರ್ಣಗೊಂಡರೆ ಕೇರಳದಿಂದ ಬೆಂಗಳೂರು ತಲುಪುವ ಅಂತರ ಕಡಿಮೆಯಾಗಲಿದೆ ಎನ್ನುವುದು ಇಲಾಖೆಯ ಯೋಜನೆ. ಆದರೆ ಇಲ್ಲಿ ಕಾಂಞಗಾಡ್ ಹಾಗೂ ಕಾಣಿಯೂರು ನಡುವಿನ ಅಂತರ ಸುಮಾರು 135 ಕಿಲೋ ಮೀಟರ್. ಇದಕ್ಕೆ ಬದಲಾಗಿ ಕಾಂಞಿಗಾಡ್- ಕುಟ್ಟಿಕ್ಕಲ್- ಮುಳ್ಳೇರಿಯಾ – ನಾಟೆಕಲ್ – ಏತಡ್ಕ- ಪೆರ್ಲ – ಅಡ್ಯನಡ್ಕ – ವಿಟ್ಲ- ಪುತ್ತೂರು ರೈಲ್ವೇ ಮಾರ್ಗ ನಿರ್ಮಾಣವಾದರೆ ಅನೇಕ ಅನುಕೂಲಗಳಿವೆ ಎನ್ನುವುದು ಪುತ್ತೂರು ವರ್ತರ ಸಂಘದ ಅಧ್ಯಕ್ಷ ವಾಮನ್ ತಿಳಿಸಿದ್ದಾರೆ.
ಈ ಹೊಸ ರಸ್ತೆಯ ಅಂತರ ಕೇವಲ 85 ಕಿಲೋ ಮೀಟರ್. ಎರಡನೆಯದಾಗಿ, ರಸ್ತೆಗೆ ಹೊಂದಿಕೊಂಡಂತೆ ರೈಲ್ವೇ ಮಾರ್ಗ ನಿರ್ಮಾಣವಾಗುವುದರಿಂದ ಪರಿಸರ ನಾಶದ ಪ್ರಮಾಣ ಕಡಿಮೆಯಾಗಲಿದೆ. ಮರ ಗಿಡಗಳ ಹಾನಿ, ಗುಡ್ಡಗಳ ತೆರವು ಮೊದಲಾದ ಅನಾವಶ್ಯಕ ಪ್ರಕೃತಿ ನಾಶಕ್ಕೆ ಅವಕಾಶವೇ ಇರುವುದಿಲ್ಲ. ಮಾತ್ರವಲ್ಲ, ಪುತ್ತೂರು ಸೇರಿದಂತೆ ಅಸುಪಾಸಿನ ಪಟ್ಟಣಗಳ ಅಭಿವೃದ್ಧಿಗೆ ಇದು ತುಂಬಾ ಪೂರಕವಾಗಿರಲಿದೆ. ಕೇರಳ, ಕರ್ನಾಟಕದ ಮೈಸೂರು-ಬೆಂಗಳೂರು, ಮಹಾರಾಷ್ಟ್ರ ಈ ಮೂರು ರಾಜ್ಯಗಳು ಪರಸ್ಪರ ಹತ್ತಿರವಾಗಲಿದೆ. ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾಕೇಂದ್ರದ ಕೂಗಿಗೆ ಪೂರಕವಾಗಿ ಈ ರೈಲ್ವೇ ಹೊಸ ಮಾರ್ಗ ಪುತ್ತೂರಿಗೆ ಇನ್ನೊಂದು ಮೈಲಿಗಲ್ಲು. ಹಾಗಾಗಿ, ಈ ಪ್ರಸ್ತಾವನೆಯನ್ನು ಕೇಂದ್ರ ರೈಲ್ವೇ ಸಚಿವರಿಗೆ, ರೈಲ್ವೇ ಇಲಾಖೆಯ ರಾಜ್ಯ ಖಾತೆಯ ಸಚಿವರಿಗೆ ದಕ್ಷಿಣ ಕನ್ನಡ ಸಂಸದರ ಮೂಲಕ ಸಲ್ಲಿಸಲಾಗುವುದು ಎಂದು ವಾಮನ್ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.