ಶುಕ್ರವಾರ ಇಸ್ರೇಲ್ ನಡೆಸಿದ ಮಾರಣಾಂತಿಕ ದಾಳಿಗೆ ಇರಾನ್ ಪ್ರತ್ಯುತ್ತರ ನೀಡಿದೆ. ಇರಾನ್ ದೇಶವು ಶನಿವಾರ ಬೆಳಗ್ಗೆ ಇಸ್ರೇಲ್ ಮೇಲೆ ಹೊಸದಾಗಿ ಕ್ಷಿಪಣಿ ದಾಳಿಯನ್ನು ಆರಂಭಿಸಿದೆ. ವಿಶೇಷವಾಗಿ, ಯಹೂದಿ ರಾಷ್ಟ್ರದ ಉತ್ತರ ಭಾಗವನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸುತ್ತಿದೆ. ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಲ್ಲಿ ನಡೆದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯಲ್ಲಿ ಹಲವಾರು ನಾಗರಿಕರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇರಾನ್ ಮೇಲೆ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಪ್ರಮುಖ ಸೇನಾ ಅಧಿಕಾರಿಗಳು ಸೇರಿದಂತೆ ಇಸ್ಲಾಮಿಕ್ ರೆವೆಲ್ಯುಶನರಿ ಗಾರ್ಡ್ಸ್‌ನ ಮುಖ್ಯಸ್ಥ ಹುಸೇನ್ ಸಲಾಮಿ ಸಾವನ್ನಪ್ಪಿದ್ದಾರೆ. ಇದು ಇರಾನ್ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇರಾನ್ ಸೇನ್ ಇಸ್ರೇಲ್‌ಗೆ ನುಗ್ಗಿದೆ. ರಾಜಧಾನಿ ಟೆಲ್ ಅವೀವ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ದಾಳಿ ಕುರಿತು ಮಾಹಿತಿ ನೀಡಿರುವ ಇರಾನ್ ಸೇನೆ, ‘ಇಸ್ರೇಲ್ ತನ್ನ ಪರಮಾಣು ನೆಲೆಗಳ ಮೇಲೆ ನೇರ ದಾಳಿ ನಡೆಸಿದೆ. ಇದರಲ್ಲಿ ಪರಮಾಣು ತಜ್ಞರು ಸೇರಿದಂತೆ ಪ್ರಮುಖರು ಹತ್ಯೆಗೆ ಈಡಾಗಿದ್ದಾರೆ. ಇದು ನಮಗೆ ಆಘಾತ ಉಂಟುಮಾಡಿದೆ. ಇದಕ್ಕೆ ನಾವು ಪ್ರತಿಕಾರ ತೀರಿಸಿಕೊಳ್ಳುತ್ತೇವೆ. ಈಗಾಗಲೇ ಇಸ್ರೇಲ್‌ನ ಹಲವು ನಗರಗಳ ಮೇಲೆ ನೂರಾರು ಕ್ಷಿಪಣಿಗಳನ್ನು ಹಾರಿಸಲಾಗಿದೆ’ ಎಂದು ಹೇಳಿದೆ.
ಇರಾನ್ ಹಾಗೂ ಇಸ್ರೇಲ್‌ನ ಈ ನಡೆಯಿಂದ ಮದ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇದು ದೊಡ್ಡ ಯುದ್ಧಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಇದರಿಂದ ಜಾಗತಿಕ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದೂ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್, ‘ಇಸ್ಲಾಮಿಕ್ ರಾಷ್ಟ್ರದಿಂದ ಉಡಾವಣೆಗೊಂಡ ಕ್ಷಿಪಣಿಗಳನ್ನು ನಾವು ಪತ್ತೆ ಹಚ್ಚಿದ್ದೇವೆ. ಇವುಗಳನ್ನು ತಡೆಯುವ ವೇಳೆ ಸ್ಫೋಟಗಳು ಸಂಭವಿಸಿವೆ. ಟೆಲ್ ಅವೀವ್‌ನಲ್ಲಿ ಸಂಭವಿಸಿದ ದೊಡ್ಡ ಸ್ಫೋಟಗಳಲ್ಲಿ ಹಲವಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜೆರುಸಲೆಮ್‌ನಲ್ಲಿಯೂ ಸ್ಫೋಟಗಳು ಸಂಭವಿಸಿವೆ. ಇದಕ್ಕೆ ನಾವು ಪ್ರತಿಕಾರ ಹೇಳುತ್ತೇವೆ’ ಎಂದು ತಿಳಿಸಿದೆ.
ಇಸ್ರೇಲ್ ವಿರುದ್ಧ ಕಿಡಿಕಾರಿರುವ ಇರಾನ್‌ನ ಅತ್ಯುನ್ನತ ನಾಯಕ ಅಲಿ ಖಮೇನಿ, ಯುಹೂದಿ ರಾಷ್ಟ್ರಕ್ಕೆ ನಾವು ಪಾಠ ಕಲಿಸಲು ಶಪಥ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಖಮೇನಿ ಅವರ ಹೇಳಿಕೆ ಹೊಂದಿರುವ ವಿಡಿಯೊ ತುಣುಕನ್ನು ಇರಾನ್‌ನ ಸರ್ಕಾರಿ ಪ್ರಾಯೋಜಿತ ದೂರದರ್ಶನದಲ್ಲಿ ಪ್ರಸಾರ ಮಾಡಲಾಗಿದೆ.