ಬೆಂಗಳೂರು: 2028 ರಲ್ಲಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ. ಚರ್ಚೆಗೆ ಕರೆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚುನಾವಣೆ ಮಾಡುವಂತೆ ಹೇಳುತ್ತಾರೆ. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಅಧಿಕಾರದಲ್ಲಿ ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾವಗಡದ ಬಹುಗ್ರಾಮ ಕುಡಿಯುವ ಯೋಜನೆ, 2,250 ಮೆಗಾ ವ್ಯಾಟ್ ಸೋಲಾರ್ ಪ್ಲಾಂಟ್ ಘೋಷಣೆ ಸೇರಿ ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮುಖ್ಯಮಂತ್ರಿಗಳು ಮಾತನಾಡಿದರು.
2018ರ ಜನವರಿಯಲ್ಲಿ ಪಾವಗಡ ಮತ್ತಿತರ ಐದು ತಾಲ್ಲೂಕುಗಳಿಗೆ ಅನುಕೂಲ ಕಲ್ಪಿಸುವ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿತ್ತು. ಇಲ್ಲಿನ ಜನರು ಫ್ಲೋರೈಡ್ ಯುಕ್ತ ನೀರನ್ನು ಕುಡಿಯುವ ಅನಿವಾರ್ಯತೆ ಇತ್ತು. ಇದರಿಂದ ಜನರಿಗೆ ಆರೋಗ್ಯದ ತೊಂದರೆಗಳಿಗೆ ಒಳಗಾಗುತ್ತಿದ್ದರು. ಈ ಸಮಸ್ಯೆಯಿಂದ ಜನರನ್ನು ಹೊರತರಲು ಸುಮಾರು 200 ಕಿ.ಮೀ. ನಷ್ಟು ದೂರವಿರುವ ತುಂಗಭದ್ರಾ ಜಲಾಶಯದ ಹಿನ್ನೀರನ್ನು ಪಾವಗಡಕ್ಕೆ ತರುವ ಯೋಜನೆ ಇದಾಗಿದ್ದು, ಇಂದು ಲೋಕಾರ್ಪಣೆಗೊಂಡಿದೆ. ಹಿಂದಿನ ಅವಧಿಯಲ್ಲಿಯೂ ನಮ್ಮ ಸರ್ಕಾರವೇ ಅಧಿಕಾರದಲ್ಲಿದ್ದಿದ್ದರೆ ಯೋಜನೆಯನ್ನು ಮೂರು ವರ್ಷಗಳ ಮುಂಚೆಯೇ ಪೂರ್ಣಗೊಳಿಸಬಹುದಾಗಿತ್ತು.
ಪಾವಗಡ ತಾಲ್ಲೂಕಿನ 270 ಹಳ್ಳಿಗಳಿಗೆ ಮತ್ತು ಪಾವಗಡ ಪಟ್ಟಣಕ್ಕೆ ಈ ಯೋಜನೆಯಿಂದ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಈ ಯೋಜನೆಗೆ ಹಗಲಿರುಳು ದುಡಿದ ಸಚಿವರು ಹಾಗೂ ಶಾಸಕರ ಪ್ರಯತ್ನಗಳು ಇಂದು ಫಲಿಸಿದೆ. ಈ ಯೋಜನೆಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸುವ ಸುಯೋಗ ನನಗೆ ದೊರೆತಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ನಮ್ಮ ಸರ್ಕಾರದ ಮೇಲೆ ಸುಳ್ಳು ಅಪವಾದಗಳನ್ನು ಮಾಡುವ ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ? ಬಿಜೆಪಿಯವರು ರಾಜ್ಯದಲ್ಲಿ 9 ವರ್ಷಗಳು ಅಧಿಕಾರಿದಲ್ಲಿದ್ದರೂ ಇಂತಹ ಯೋಜನೆಯನ್ನು ಜಾರಿಗೆ ತರಲು ಅವರಿಂದ ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ಟೀಕಿಸಿದ್ದರು, ಈಗ ಅದನ್ನೇ ಕಾಪಿ ಮಾಡುತ್ತಿದ್ದಾರೆ. ಹಿಂದೆ ಅಧಿಕಾರ ನಡೆಸಿದ ರಾಜ್ಯದ ಬಿಜೆಪಿಯವರ ಸಾಧನೆ ಏನು?
ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ.1 ಆಗಿದೆ. ಈಗಾಗಲೇ 2,050 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ 2,400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದರಿಂದ ಪಾವಗಡದ ಚಿತ್ರಣವೇ ಬದಲಾಗಲಿದೆ. ನಂಜುಂಡಪ್ಪನವರ ವರದಿಯಲ್ಲಿ ಪಾವಗಡವನ್ನು ಅತ್ಯಂತ ಹಿಂದುಳಿದ ತಾಲ್ಲೂಕು ಎಂದು ಗುರುತಿಸಲ್ಪಟ್ಟಿತ್ತು. ಈಗ ತುಮಕೂರಿನ ತಾಲ್ಲೂಕಿನ ಪಟ್ಟಿಯಲ್ಲಿ ಪಾವಗಡ ಮೊದಲನೇ ಸ್ಥಾನದಲ್ಲಿದ್ದು, ಈ ಅಭಿವೃದ್ಧಿಗೆ ನಮ್ಮ ಸರ್ಕಾರವೇ ಕಾರಣ. ಈ ಭಾಗಕ್ಕೆ ಸೇರಿದ ನಮ್ಮ ಪಕ್ಷದ ಸಚಿವರು ಹಾಗೂ ಶಾಸಕರಿಗೆ ಜನರು ಸದಾ ಆಶೀರ್ವಾದ ಮಾಡಬೇಕು.
2004 ರಲ್ಲಿ ನಾನು ಜೆಡಿಎಸ್ ನಲ್ಲಿದ್ದಾಗ, ಜೆಡಿಎಸ್ ಪಕ್ಷ 59 ಸ್ಥಾನಗಳನ್ನು ಗೆದ್ದಿತ್ತು, ಆದ್ರೆ ಹಿಂದಿನ ಚುನಾವಣೆಯಲ್ಲಿ ಅವರು ಕೇವಲ 18 ಸ್ಥಾನಗಳನ್ನು ಗೆದ್ದರು. ಪಾವಗಡ ಕ್ಷೇತ್ರದಲ್ಲಿ ಜಿಡಿಎಸ್ ಪಕ್ಷ ಗೆಲ್ಲಲು ಸಾಧ್ಯವಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ಬಿಜೆಪಿ ಹಾಗೂ ಜೆಡಿಎಸ್ ಅನ್ನು ಕಂಗೆಡಿಸಿದೆ ಎಂದು ತಿಳಿಸಿದರು.
2028 ರಲ್ಲಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ. ಚರ್ಚೆಗೆ ಕರೆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಚುನಾವಣೆ ಮಾಡುವಂತೆ ಹೇಳುತ್ತಾರೆ. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಚುನಾವಣೆಗೆ ನಾವು ಹೆದರುವುದಿಲ್ಲ. ವಿಜಯೇಂದ್ರ ಕುರ್ಚಿ ಅಲ್ಲಾಡುತ್ತಿದ್ದು, 2028 ರ ವರೆಗೆ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ತಿಳಿದಿಲ್ಲ.
ನಾಳೆ ಚುನಾವಣೆಯಾದರೂ ನಾವು ಗೆದ್ದೆ ಗೆಲ್ಲುತ್ತೇವೆ. ಆದರೆ, ಜನ ನಮಗೆ 2028 ರ ಮೇ ವರೆಗೆ ಅಧಿಕಾರ ನೀಡಿದ್ದಾರೆ. ಅದರಂತೆ ಅಲ್ಲಿಯವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತೇವೆ. 2028 ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ, ಜೆಡಿಎಸ್ ಅನ್ನು ಸೋಲಿಸಿ ಪುನಃ ಅಧಿಕಾರಕ್ಕೆ ಬಂದೇ ಬರುತ್ತೇವೆ. 2050 ಮೆಗಾ ವ್ಯಾಟ್ ಸೌರಶಕ್ತಿ ಉತ್ಪಾದಿಸುವ ಘಟಕವನ್ನು ಲೋಕಾರ್ಪಣೆ ಮಾಡಲಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಪಾವಗಡ ತಾಲೂಕು ಮುಂದುವರೆಯುವ ಬಗ್ಗೆ ಸಂತೋಷವಿದೆ ಎಂದರು.