ಪುತ್ತೂರು: ಜನ ಸಂಖ್ಯೆ ಬೆಳೆಯುತ್ತಾ ಹೋದಂತೆ ಮೂಲ ಸೌಕರ್ಯ ಹೊಂದಾಣಿಕೆ ಕಷ್ಟಕರವಾಗಿದೆ. ಜನರ ಆವಶ್ಯಕತೆಗಳನ್ನು ಪೂರೈಸುವಲ್ಲಿ ದೇಶ ಹಿಂದೆ ಬೀಳುತ್ತದೆ. ಜನಸಂಖ್ಯೆ ಹೆಚ್ಚಾದಂತೆ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜು.21ರಂದು ದ. ಕ. ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿ ಕಛೇರಿ ಪುತ್ತೂರು ತಾಲೂಕು ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ-2025 ಉದ್ಘಾಟಿಸಿ, ಅವರು ಮಾತನಾಡಿದರು. ವೈದ್ಯಕೀಯ ವಿಭಾಗ ವೇಗವಾಗಿ ಮುಂದುವರಿಯುತ್ತಿದ್ದು, ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪುವವರ ಸಂಖ್ಯೆ ಇಳಿಕೆಯಾಗಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ಇದಲ್ಲದೆ ಬಡ ದೇಶಗಳಿಂದ ವಲಸೆ ಬರುವ ಸ್ಥಿತಿ ನಿರ್ಮಾಣವಾಗುತ್ತದೆ. ಜನರಿಗೆ ಶಿಕ್ಷಣ ನೀಡಿ, ಅವರಲ್ಲಿ ಅರಿವು ಮೂಡಿಸಿ ನಿಯಂತ್ರಣ ಮಾಡಬೇಕಾಗಿದೆ. ಜನಸಂಖ್ಯಾ ನಿಯಂತ್ರಣ ಒಬ್ಬರಿಂದ ಸಾಧ್ಯ ಇಲ್ಲ. ದೇಶದ ಜನತೆ ನಿರ್ದಾರ ಮಾಡಬೇಕು. ಜನಸಂಖ್ಯೆ ಮಿತಿಯಲ್ಲಿದ್ದರೆ ದೇಶದ ಪರಿಸ್ಥಿತಿ ಸುಧಾರಿಸಲು ಸಾಧ್ಯ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಪುರುಷ ಮತ್ತು ಮಹಿಳೆಯ ಅನುಪಾತದಲ್ಲಿ ಬಹಳಷ್ಟು ವ್ಯತ್ಯಾಸಗಳಿದ್ದು ಅದರ ಅಂತರ ಕಡಿಮೆ ಮಾಡಲು ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿದೆ. ಪುರುಷರಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆಯಲ್ಲಿ ಪುತ್ತೂರು ತಾಲೂಕು ರಾಜ್ಯದಲ್ಲಿ ಈ ವರ್ಷ ದ್ವಿತೀಯ ಸ್ಥಾನ ಪಡೆದುಕೊಂಡಿದೆ ಎಂದರು.
ಪುರುಷರ ಸಂತಾನ ಹರಣ ಶಸ್ತ್ರಚಿಕಿತ್ಸೆಯಲ್ಲಿ ತಾಲೂಕು ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾ ಅಧಿಕಾರಿ ವಿದ್ಯಾ, ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಮೀನಾಕ್ಷಿ, ಆಶಾ ಕಾರ್ಯಕರ್ತೆಯರಾದ ತಿಂಗಳಾಡಿಯ ಕಲಾವತಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸುಮಿತ್ರಾ ಅವರನ್ನು ಸನ್ಮಾನಿಸಲಾಯಿತು. ಕುಟುಂಬ ಕಲ್ಯಾಣ ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಮುಖ್ಯ ಅತಿಥಿಯಾಗಿದ್ದ ನಗರ ಸಭಾ ಪೌರಾಯಕ್ತ ಮಧು ಎಸ್ ಮನೋಹರ್,ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಿಶಿರ ಎಂ. ಪಿ. ಬ್ರೈಟ್ ಪ್ಯಾರಮೆಡಿಕಲ್ ಕಾಲೇಜು ಸಂಚಾಲಕ ಮಹಮ್ಮದ್ ಸಲೀಂ ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಲಕ್ಷ್ಮೀ ಎಂ., ಸರೋಜಾ, ರವಿಶಂಕರ್, ತಾಲೂಕು ಟಿ.ಬಿ. ಚಿಕಿತ್ಸಾ ಮೇಲ್ವಿಚಾರಕ ರವಿ ಸುವರ್ಣ ಉಪಸ್ಥಿತರಿದ್ದರು.