ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಹೇಗೆ ಮಾಡಬೇಕು ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಸೋಮವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಪರು ಪರೀಕ್ಷೆ ಬೇಕೋ, ಬೇಡವೋ ಎಂಬುದನ್ನು ನಾನು ನಿರ್ಧರಿಸಲು ಸಾಧ್ಯವಿಲ್ಲ. ಎಸ್ಐಟಿ ಸರಿಯಾಗಿಯೇ ತನಿಖೆ ನಡೆಸುತ್ತಿದೆ. ಹಲವು ಹೇಳಿಕೆಗಳು ಹೊರಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದರೆ, ಹೇಳಿಕೆ ನೀಡುವುದರಿಂದ ಸತ್ಯ ಹೊರಬರುವುದಿಲ್ಲ. ರಾಜಕಾರಣಿಗಳು ಮೊದಲು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ತನಿಖೆಗೆ ಗಡುವು ನಿಗದಿಪಡಿಸಲು ಸಾಧ್ಯವಿಲ್ಲ. ‘ಇಷ್ಟು ಸಮಯದಲ್ಲಿ’ ತನಿಖೆಯನ್ನು ಮುಗಿಸಲು ನಾವು ಅವರಿಗೆ ಆದೇಶಿಸಲು ಆಗದು. ಸಾಧ್ಯವಾದಷ್ಟು ಬೇಗ ತನಿಖೆಯನ್ನು ಮುಗಿಸಲು ಮಾತ್ರ ನಾನು ಎಸ್ಐಟಿಗೆ ಸೂಚಿಸಿದ್ದೇನೆ ಎಂದರು.
ಧರ್ಮಸ್ಥಳ ಚಲೋ ಕೈಗೊಂಡಿರುವ ಬಿಜೆಪಿ ಕುರಿತು ಪ್ರತಿಕ್ರಿಯಿಸಿದ ಅವರು, ಅವರೆಲ್ಲರೂ ಮಂಜುನಾಥನ ದರ್ಶನ ಪಡೆಯಲು ಹೋಗುತ್ತಿರಬೇಕು. ಅವರು ಹೋಗಲಿ. ದರ್ಶನಕ್ಕೆ ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂಬುದೇ ನನ್ನ ವಿನಂತಿ ಎಂದು ಹೇಳಿದರು.