ಮಂಗಳೂರು: ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಚುರುಕುಗೊಂಡಿದೆ. ಬುರುಡೆ ಹಿಡಿದುಕೊಂಡು ಕಥೆ ಕಟ್ಟಿದ್ದ ಅನಾಮಿಕ ದೂರುದಾರ ಚಿನ್ನಯ್ಯನನ್ನೇ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಇಂದು ಬಿಜೆಪಿ ವತಿಯಿಂದ ಧರ್ಮಸ್ಥಳ ಚಲೋ ಸಮಾವೇಶ ನಡೆಸಿದ್ದಾರೆ. ಈ ಸಭೆ ಮುಗಿಯುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೌಜನ್ಯ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ನಿಮ್ಮ ಜೊತೆಗಿರುವುದಾಗಿ ಸೌಜನ್ಯ ತಾಯಿಗೆ ಭರವಸೆ
ಬಿಜೆಪಿ ಸಮಾವೇಶ ಮುಗಿಯುತ್ತಿದ್ದಂತೆ ಸೌಜನ್ಯ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತೆರಳಿದರು. ಈ ಸಂದರ್ಭದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಜೊತೆ ಅವರು ಮಾತುಕತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಸೌಜನ್ಯ ಹೋರಾಟದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ಬಿವೈ ವಿಜಯೇಂದ್ರ ಮುಂದೆ ನನ್ನ ಮಗಳ ಸಾವಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಕಣ್ಣೀರು ಹಾಕಿರುವ ಘಟನೆ ಕೂಡ ನಡೆದಿದೆ.ಸಂಸದ ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕ ಹರೀಶ್ ಪೂಂಜಾ ಸಹಿತ ಹಲವು ನಾಯಕರು ಜೊತೆಗಿದ್ದರು.