ಮಂಗಳೂರು: ಸುಮಾರು 13 ವರ್ಷಗಳ ಹಿಂದೆ ಅತ್ಯಾಚಾರವಾಗಿ ಕೊಲೆಯಾಗಿದ್ದ ಸೌಜನ್ಯಾ ಪ್ರಕರಣಕ್ಕೆ ಇದೀಗ ಬಹುದೊಡ್ಡ ತಿರುವು ಸಿಕ್ಕಿದೆ. ಇತ್ತೀಚೆಗೆ ಸೌಜನ್ಯ ತಾಯಿ ಕುಸುಮಾವತಿ ನೀಡಿರುವ ದೂರಿನ ಬಗ್ಗೆ ಎಸ್‌ಐಟಿ ತನಿಖೆ ನಡೆಸುವುದಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಉದಯ್ ಜೈನ್ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ.
ಎಸ್ಐಟಿ ಕಚೇರಿಗೆ ಆಗಮಿಸಿದ ಉದಯ ಕುಮಾರ್ ಜೈನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು ಯಾವುದೇ ತನಿಖೆಗೆ ಸಿದ್ಧ. ಸೌಜನ್ಯಾ ತಾಯಿ ಕುಸುಮಾ ಎಸ್ಐಟಿಗೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ನಮ್ಮನ್ನು ಕರೆದಿರಬಹುದು. ಚಿನ್ನಯ್ಯ ನೀಡಿದ ಹೇಳಿಕೆಯ ಕಾರಣಕ್ಕೂ ಕರೆದಿರಬಹುದು ಎಂದು ಹೇಳಿದರು.
ಬುರುಡೆ ಪ್ರಕರಣದ ದಿಕ್ಕು ಬದಲಿಸುವ ಹುನ್ನಾರ ಇದು. ಗುಂಡಿಗಳನ್ನು ತೋಡಿಯಾಗಿದೆ. ಸದ್ಯ ಪ್ರಕರಣವನ್ನು ವಿಷಯಾಖತರ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಬುರುಡೆ ಪ್ರಕರಣ ಮುಚ್ಚಿ ಹಾಕಲು ಈ ಪ್ರಕರಣವನ್ನ ಮತ್ತೆ ಮುನ್ನಲೆಗೆ ತರುತ್ತಿದ್ದಾರೆ ಎಂದು ಉದಯ್ ಜೈನ್ ಆರೋಪಿಸಿದ್ದಾರೆ.
ಉದಯ್ ಜೈನ್, ಮಲ್ಲಿಕ್ ಜೈನ್, ಧೀರಜ್ ಕೆಲ್ಲಾ ಅವರಿಗೆ ವಿಚಾರಣೆಗೆ ಕರೆ ಮಾಡಲಾಗಿದೆ. ಸೌಜನ್ಯ ಪ್ರಕರಣದ ಸಿಬಿಐ ತನಿಖೆಯಲ್ಲಿಯೂ ಈ ಮೂವರ ವಿರುದ್ಧ ಪ್ರಕರಣ ಸಾಬೀತಾಗಿಲ್ಲ. ಮೂವರೂ ಬ್ರೈನ್ ಮ್ಯಾಪಿಂಗ್ ಗೂ ಹಾಜರಾಗಿದ್ದರು.
ಸಿಬಿಐ ತನಿಖೆ ಆಗುವಾಗ ನಾವೇ ಖುದ್ದಾಗಿ ಹೇಳಿದ್ದೆವು. ಕೋರ್ಟಿಗೆ ಅರ್ಜಿ ಹಾಕಿದ್ದೆವು. ನಮ್ಮನ್ನೂ ತನಿಖೆ ಮಾಡಿ, ನಮ್ಮ ವಿರುದ್ಧದ ಆರೋಪಗಳಿಂದ ಎಲ್ಲೂ ಓಡಾಡಲು ಸಾಧ್ಯವಾಗ್ತಿಲ್ಲ. ನಮಗೂ ತಾಯಿ, ತಂಗಿಯರೆಲ್ಲ ಇದ್ದಾರೆ ಎಂದು. ಆಗ ಕೋರ್ಟ್ ಹೇಳಿತ್ತು, ಆಯ್ತು ಅರ್ಜಿ ಹಾಕಿ ಅಂದಿತ್ತು. ಬಳಿಕ ನಾರ್ಕೊ ಅನಾಲಿಸಿಸ್ಟ್ ಟೆಸ್ಟ್ ಕೂಡಾ ಮಾಡಲಾಗಿತ್ತು.
ಬಳಿಕ ಸೌಜನ್ಯಾ ತಂದೆ ಹಾಗೂ ಸಿಬಿಐ ವಕೀಲರು ಮತ್ತೆ ನಮ್ಮನ್ನು ಆರೋಪಿ ಎಂದು ಮಾಡಿದ್ದರು. ನಾವು ಆರೋಪ ಮಾಡಿದ್ದಕ್ಕೆ ಹೈಕೋರ್ಟ್ ನಿಂದ ಸ್ಟೇ ತಂದಿದ್ದೆವು. ಆದರೆ ತನಿಖೆ ಮಾಡದಂತೆ ಸ್ಟೇ ತಂದಿದ್ದೇವೆ ಎಂದು ಅವರು ಎಲ್ಲ ಜನರಿಗೂ , ಗೊಂದಲ ಸೃಷ್ಟಿಸಿದರು. ಎಸ್ ಐಟಿ ತನಿಖೆಗೆ ಸಂಪೂರ್ಣ ಸಹಕಾರ ಇದೆ. ಸೌಜನ್ಯಾ ಪ್ರಕರಣದ ಮರುತನಿಖೆಗೂ ಒಪ್ಪಿಗೆ ಇದೆ ಎಂದು ಉದಯ್ ಜೈನ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಸೌಜನ್ಯ ಪ್ರಕರಣದ ಪ್ರತ್ಯಕ್ಷದರ್ಶಿ ಒಬ್ಬರು ಎಸ್ ಐಟಿಗೆ ದೂರು ಸಲ್ಲಿಕೆ ಮಾಡಿದ್ದರು. ಆ ದೂರಿನ ಹಿನ್ನೆಲೆ ಕರೆ ನೀಡಿರುವ ಸಾಧ್ಯತೆ ಇದೆ.