ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳಿನ ತೀವ್ರ ಕೊರತೆ ಉಂಟಾಗಿದ್ದು, ಇದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಬಡವರ ಮನೆ ಕಟ್ಟುವ ಕನಸು ನುಚ್ಚು ನೂರಾಗಿದೆ. ಕಟ್ಟಡ ಕಾರ್ಮಿಕರು, ಗುತ್ತಿಗೆದಾರು ಕೆಲಸವಿಲ್ಲದ ನಿರುದ್ಯೋಗಿದ್ದಾರೆ. ಈ ಗಂಭೀರ ಸಮಸ್ಯೆಗೆ ಇನ್ನು ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಸೂಕ್ತ ಪರಿಹಾರ ದೊರೆಯದಿರುವುದನ್ನು ಖಂಡಿಸಿ ನಾಳೆ( ಸೆ.16) ಭಾರತೀಯ ಜನತಾ ಪಾರ್ಟಿ ವತಿಯಿಂದ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಈ ಧರಣಿ ನಡೆಯಲಿದೆ. ಕಾಂಗ್ರೆಸ್ ಸರ್ಕಾರದ ಈ ನಿರ್ಲಕ್ಷ್ಯ ಹಾಗೂ ನಿರ್ಲಜ್ಜ ಧೋರಣೆಯಿಂದ ಸಾವಿರಾರು ಕೂಲಿ ಕಾರ್ಮಿಕರ ಕುಟುಂಬದ ಬದುಕು ಬೀದಿಗೆ ಬಿದ್ದಿದೆ. ಕಟ್ಟಡ ನಿರ್ಮಾಣ ವಲಯದಲ್ಲಿ ನೂರಾರು ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ. ಕೆಂಪು ಕಲ್ಲು ಗಣಿಗಾರಿಕೆಗೆ ಇಲ್ಲ-ಸಲ್ಲದ ನಿರ್ಬಂಧ ಹೇರಿ ಬಳಿಕ ಸಮಸ್ಯೆ ಬಗೆಹರಿಸುವುದಾಗಿ ಕಾಂಗ್ರೆಸ್ ಸರ್ಕಾರವು ಕಳೆದ ಮೂರು ತಿಂಗಳಿನಿಂದ ಬರೀ ಪೊಳ್ಳು ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಕ್ಯಾ. ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ನಾಳೆ ನಡೆಯುವ ಈ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಬಿಜೆಪಿ ನಾಯಕರು, ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಸರ್ಕಾರದ ಜನವಿರೋಧಿ ನಿರ್ಧಾರಗಳಿಂದ ಬಾಧಿತರಾಗಿರುವವರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಕ್ಯಾ. ಚೌಟ ಕರೆ ನೀಡಿದ್ದಾರೆ.