ಸೇವಾಭಾರತಿ (ರಿ.), ಕನ್ಯಾಡಿ – ಸೇವಾಧಾಮ ಇದರ ನೇತೃತ್ವದಲ್ಲಿ, ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಕ್ಲಬ್ ದೇರಳಕಟ್ಟೆ, ರೋಟರಿ ಕ್ಲಬ್ ಮಂಗಳೂರು ಸಿಟಿ, ರೋಟರಿ ಕ್ಲಬ್ ಮಂಗಳೂರು ಡೌನ್ ಟೌನ್ ಮತ್ತು ರೋಟರಿ ಕ್ಲಬ್ ಮಂಗಳೂರು ಸೌತ್ ಇವುಗಳ ಸಹಭಾಗಿತ್ವದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಹಾಗೂ ಸೇವಾಧಾಮ 8ನೇ ವರ್ಷದ ಪಾದಾರ್ಪಣೆಯ ಸಂದರ್ಭದಲ್ಲಿ ಜನಜಾಗೃತಿಗಾಗಿ ಗಾಲಿಕುರ್ಚಿ ಜಾಥಾವನ್ನು ಸಪ್ಟೆಂಬರ್ 17 ರಂದು ಮಂಗಳೂರಿನಲ್ಲಿ ನಡೆಸಲಾಯಿತು.
ರೋಟರಿ ಜಿಲ್ಲಾ ಗವರ್ನರ್ ಎಲೆಕ್ಟ್ ರೋ| ಸತೀಶ್ ಬೋಳಾರ್ ರವರು ಹಸಿರು ನಿಶಾನೆಯನ್ನು ತೋರಿಸಿ ಜಾಥಾಕ್ಕೆ ಚಾಲನೆಯನ್ನು ನೀಡಿದರು. ಬೆನ್ನುಹುರಿ ಅಪಘಾತದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಮುಂಭಾಗದಿಂದ ಆರಂಭಗೊಂಡು, ಕ್ಲಾಕ್ ಟವರ್ ಮುಖಾಂತರ ಸಾಗಿ DHO ಆಫೀಸಿಗೆ ತೆರಳಿ ನಂತರ ಯೂನಿವರ್ಸಿಟಿ ಕಾಲೇಜಿನ ತನಕ ಜಾಥಾವನ್ನು ನಡೆಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಅವರ ವ್ಯಾಪ್ತಿಗೆ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಎಲ್ಲಾ ಸರಕಾರಿ ಆಸ್ಪತ್ರೆಗಳಿಂದ ಸೆಲ್ಫ್ ಕೇರ್ ಮತ್ತು ಮೆಡಿಕಲ್ ಕಿಟ್ ಅನ್ನು ಒದಗಿಸಿಕೊಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್ ಆರ್ ತಿಮ್ಮಯ್ಯ ರವರಿಗೆ ಮನವಿ ಮಾಡಲಾಯಿತು.
ಒಟ್ಟು 11 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರೊಂದಿಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿಗಳು ಡಾ. ಡಿ ಎಸ್ ಶಿವಪ್ರಕಾಶ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಶೇಷ ಚೇತನರ ಸಂಘದ ಅಧ್ಯಕ್ಷರಾದ ಡಾ. ಮುರುಳೀಧರ್ ನಾಯಕ್, ನಿಕಟಪೂರ್ವ ಜಿಲ್ಲಾ ಗವರ್ನರ್, ರೋಟರಿ ಜಿಲ್ಲೆ 3181 ರೋ। ವಿಕ್ರಮ್ ದತ್ತ, ಸಹಾಯಕ ಗವರ್ನರ್ ರೋ| ಡಾ. ರವಿಶಂಕರ ರಾವ್, ರತ್ನ ಎಜ್ಯುಕೇಶನ್ ಟ್ರಸ್ಟ್(ರಿ.),ದೇರಳಕಟ್ಟೆಯ ಅಧ್ಯಕ್ಷರಾದ ಶ್ರೀ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು, ಸೇವಾಧಾಮ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್, ಸಹಯೋಗಿ ರೋಟರಿ ಕ್ಲಬ್ ಗಳ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಸೇವಾಭಾರತಿ ಸಿಬ್ಬಂದಿವರ್ಗ ಹಾಗೂ ಮಂಗಳೂರು ಯೂನಿವರ್ಸಿಟಿಯ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಸೇರಿದಂತೆ 150 ಮಂದಿ ಜಾಥಾದಲ್ಲಿ ಭಾಗವಹಿಸಿದ್ದರು.