ಬೆಂಗಳೂರು: ಆಟೋ ಚಾಲಕನೋರ್ವ ಬ್ಯಾಗ್ ಇಡುವ ನೆಪದಲ್ಲಿ ಯುವತಿಯ ಖಾಸಗಿ ಅಂಗಕ್ಕೆ ಕೈ ಹಾಕಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಜೆಪಿ ನಗರದ 7ನೇ ಹಂತದಲ್ಲಿ ನಡೆದಿದೆ. ಯುವತಿಯೋರ್ವಳು ಜೆಪಿ ನಗರದ ಏಳನೇ ಸ್ಟೇಜ್ ನಿಂದ ಆಟೋ ಬುಕ್ ಮಾಡಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಆಟೋ ಚಾಲಕ ಒಳಗೆ ಬ್ಯಾಗ್ ಇಡುವ ನೆಪದಲ್ಲಿ ಯುವತಿಯ ಮೈ ಮುಟ್ಟಿದ್ದಾನೆ. ಅಲ್ಲದೇ ನಿಮಗೆ ಜ್ವರ ಬಂದಿದ್ಯಾ ಎಂದು ನಾಟಕ ಮಾಡುತ್ತ ಆಕೆಯ ಹಣೆ ಮುಟ್ಟಿ ಬಳಿಕ ಏಕಾಏಕಿ ಖಾಸಗಿ ಅಂಗಕ್ಕೆ ಕೈ ಹಾಕಿದ್ದಾನೆ. ಈ ಸಂಬಂಧ ಯುವತಿ ಕೊಟ್ಟ ದೂರಿನ ಮೇರೆಗೆ ಆಟೋ ಚಾಲಕ ಹನುಮಂತಪ್ಪ ಹೆಚ್ ತಳವಾರ ಎನ್ನುವಾತನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಯುವತಿ ಬುಕ್ ಮಾಡಿದ್ದ ಆಟೋ ಲೋಕೇಶನ್‌ಗೆ ಬಂದ ತಕ್ಷಣ ಆಟೋ ಚಾಲಕ ಮೊದಲಿಗೆ ಬ್ಯಾಗ್ ಇಡುವ ನೆಪದಲ್ಲಿ ಯುವತಿಯ ಮೈ ಮುಟ್ಟಿದ್ದಾನೆ. ಅಲ್ಲದೇ ನೀನು ಸಿನಿಮಾ ಹಿರೋಯಿನ್ ತರಾ ಇದೀಯಾ ಎಂದು ಬೆಣ್ಣೆಯ ಮಾತುಗಳನ್ನಾಡಿದ್ದಾನೆ. ಬಳಿಕ ಯುವತಿ ಆಟೋ ಒಳಗೆ ಕುಳಿತುಕೊಳ್ಳುತ್ತಿದ್ದಂತೆ ಜ್ವರ ಬಂದಿದೆಯಾ ಎಂದು ಹಣೆ ಮುಟ್ಟಿದ್ದಾನೆ. ಇದಾದ ಬಳಿಕ ಆಕೆಯ ಖಾಸಗಿ ಅಂಗಕ್ಕೆ ಕೈ ಹಾಕಿದ್ದಾನೆ. ಇದರಿಂದ ವಿಚಲಿತಗೊಂಡ ಯುವತಿ ಆಟೋದಿಂದ ಜಿಗಿದು ಓಡಿಹೋಗಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಪೊಲೀಸರು ಕಾಮುಕ ಆಟೋ ನನ್ನು ಬಂಧಿಸಿದ್ದಾರೆ. ಜೊತೆಗೆ ಆತ ಕೆಲಸ ಮಾಡುತ್ತಿದ್ದ ಕ್ಯಾಬ್ ಕಂಪನಿಗೂ ಮಾಹಿತಿ ನೀಡಿ, ಆತನ ಲೈಸೆನ್ಸ್ ವಿರುದ್ಧ ಕ್ರಮ ತೆಗದುಕೊಳ್ಳಲು ಸೂಚಿಸಿದ್ದಾರೆ. ಸದ್ಯ ಪುಟ್ಟೇನಹಳ್ಳಿ ಪೊಲೀಸರು ತನಿಖೆ ನಡೆಸಿದ್ದಾರೆ.