ಸೋಮವಾರದಿಂದ ಆರಂಭವಾಗಲಿರುವ ಜಾತಿ ಗಣತಿಯಲ್ಲಿ ಕ್ರಿಶ್ಚಿಯನ್ ಜೊತೆ ಒಕ್ಕಲಿಗರನ್ನು ಸೇರಿಸಿರುವುದಕ್ಕೆ ಒಕ್ಕಲಿಗ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಒಕ್ಕಲಿಗ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದು, ಜಾತಿ ಗಣತಿ ಸಂಬಂಧ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.
ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೂರು ಪಕ್ಷಗಳ ನಾಯಕರು ಭಾಗಿಯಾದರು. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್, ಅಶ್ವತ್ಥ್ ನಾರಾಯಣ್, ಆರ್.ಅಶೋಕ್, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವೆ ಶೋಭಾ ಸೇರಿದಂತೆ ಪ್ರಮುಖರು ಭಾಗಿಯಾದರು. ಸುದೀರ್ಘ ಚರ್ಚೆ ಮೂಲಕ ಮಹತ್ವದ ನಿರ್ಧಾರವನ್ನೂ ಕೈಗೊಳ್ಳಲಾಯಿತು.
ಉಪ ಜಾತಿಯಲ್ಲೂ ಒಕ್ಕಲಿಗ ಎಂದೇ ನಮೂದಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ನಿರ್ಣಯವನ್ನು ನಿರ್ಮಲಾನಂದನಾಥ ಶ್ರೀ ಮಂಡಿಸಿದರೆ, ಅದಕ್ಕೆ ಸಭೆಯಲ್ಲಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿ, ಸದಾನಂದಗೌಡ ಸೇರಿ ಹಲವು ನಾಯಕರು ಅನುಮೋದನೆ ಕೊಟ್ಟರು.
ಆದಿ ಚುಂಚನಗಿರಿ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಒಕ್ಕಲಿಗ ನಾಯಕರ ಮಹತ್ವದ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಡಿಕೆಶಿ, ಕುಮಾರಸ್ವಾಮಿ ಕೂಡಾ ಜಾತಿಗಣತಿ ಬಗ್ಗೆ ತಮ್ಮ ನಿಲುವು ಏನೆಂಬುದನ್ನು ಹೇಳಿದ್ದಾರೆ. ಈ ಸಭೆಯಲ್ಲಿ ಸ್ವಾಮೀಜಿಗಳು ಹಲವು ನಿರ್ಣಯಗಳನ್ನು ತೆಗೆದುಕೊಂಡಿದ್ದು, ಜಾತಿ ಮುಂದೆ ಅನ್ಯ ಧರ್ಮದ ಹೆಸರನ್ನು ಸೇರಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು (ಜಾತಿಗಣತಿ) ಮುಂದೂಡುವಂತೆ ಒತ್ತಾಯಿಸುತ್ತಾ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸರ್ಕಾರಕ್ಕೆ ಕಟ್ಟುನಿಟ್ಟು ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಣಯವನ್ನು ಬೆಂಬಲಿಸುತ್ತಾ, ಸಮೀಕ್ಷೆಯ ವಿಧಾನದಲ್ಲಿ ಧರ್ಮದ ಗುರುತಿನೊಂದಿಗೆ ಜಾತಿಯನ್ನು ವರ್ಗೀಕರಿಸುವುದು ಧರ್ಮವನ್ನು ವಿಭಜಿಸುವ ಷಡ್ಯಂತ್ರವೆಂದು ಶ್ರೀಗಳು ಖಂಡಿಸಿದ್ದಾರೆ. ಈ ಹೇಳಿಕೆಯು ಒಕ್ಕಲಿಗ ಸಮುದಾಯದೊಳಗೆ ಭಾರೀ ಚರ್ಚೆಯನ್ನು ಉಂಟುಮಾಡಿದ್ದು, ಸರ್ಕಾರದ ನಿರ್ಧಾರಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.
ನಿರ್ಮಲಾನಂದ ಸ್ವಾಮೀಜಿಯವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ನಮ್ಮ ಡಿಮ್ಯಾಂಡ್ ಏನೆಂದು ನಾವು ಸ್ಪಷ್ಟವಾಗಿ ಮಂಡಿಸಿದ್ದೇವೆ. ಪ್ರಜ್ಞಾವಂತ ಸರ್ಕಾರ ಇದರ ಬಗ್ಗೆ ಗಮನ ಹರಿಸುವ ಭರವಸೆ ಇದೆ. ಸರ್ಕಾರದಲ್ಲಿ ನಮ್ಮ ಸಮಾಜದ ಜನಪ್ರತಿನಿಧಿಗಳು ಇದ್ದಾರೆ, ಅವರಿಗೆ ನಾವು ಸಂದೇಶ ಕಳುಹಿಸಿದ್ದೇವೆ. ಸಮೀಕ್ಷೆಯನ್ನು ಮುಂದೂಡುವ ಬಗ್ಗೆ ಅವರು ಸಭೆಯಲ್ಲಿ ಧ್ವನಿ ಎತ್ತುತ್ತಾರೆ” ಎಂದು ಹೇಳಿದರು. ಸಮೀಕ್ಷೆಯನ್ನು ಮುಂದೂಡುವಂತೆ ಸರ್ಕಾರವೇ ನಿರ್ಧರಿಸಬೇಕೆಂದು ಒತ್ತಿ ಹೇಳಿದ ಶ್ರೀಗಳು, “ನಮ್ಮ ರಾಜ್ಯದಲ್ಲಿ 7 ಕೋಟಿ ಜನಸಂಖ್ಯೆ ಇದೆ. ಜಾತಿ ಗಣತಿ ನಡೆಸಲು ತೆಲಂಗಾಣಕ್ಕೆ ಮೂರು ತಿಂಗಳು ಬೇಕಾಗಿದೆ, ಹಾಗಾದ್ರೆ ನಮ್ಮ ರಾಜ್ಯಕ್ಕೆ ಎಷ್ಟು ಸಮಯ ಬೇಕು ಎಂಬುದನ್ನು ಸರ್ಕಾರವೇ ತಿಳಿಯಬೇಕು” ಎಂದು ಸಲಹೆ ನೀಡಿದರು.
ಧರ್ಮೀಯ ಗುರುತುಗಳೊಂದಿಗೆ ಜಾತಿಯ ವರ್ಗೀಕರಣವನ್ನು ಶ್ರೀಗಳು ತೀವ್ರವಾಗಿ ಖಂಡಿಸಿದರು. “ಜಾತಿಗಣತಿ ಮುಂದೂಡಿ ಅನ್ನೋದು ನಮ್ಮ ನಿರ್ಣಯ. ಸರ್ಕಾರ ಸ್ಪಂದಿಸುವ ಭರವಸೆ ಇದೆ. ಆದರೆ ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ ಸರಿ ಇಲ್ಲ. ಇದು ಮುಂದೆ ಮುಸ್ಲಿಂ ಒಕ್ಕಲಿಗ, ಮುಸ್ಲಿಂ ಲಿಂಗಾಯತ ಅಂತಾ ಆದರೆ ಹೇಗೆ? ಮುಸ್ಲಿಂ ಹಿಂದೂ ಅಂತ ಮಾಡಿದರೆ ಇದನ್ನು ಸಹಿಸಲು ಆಗಲ್ಲ” ಎಂದು ಎಚ್ಚರಿಕೆ ನೀಡಿದರು. ಈ ವಿಧಾನವು ಧರ್ಮಗಳ ನಡುವೆ ವಿಭಜನೆಯನ್ನು ಹೆಚ್ಚಿಸುತ್ತದೆ ಎಂದು ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದರು.
ಸಮೀಕ್ಷೆಯ ಫಾರ್ಮ್ಯಾಟ್ ಬಗ್ಗೆ ಸ್ಪಷ್ಟ ಸೂಚನೆ ನೀಡಿರುವ ಶ್ರೀಗಳು, “ಕೋಡ್ A 15 45 ಅಂತ ಬರೆಸಬೇಕು. ಎಲ್ಲರೂ ಒಕ್ಕಲಿಗ ಅಂತ ಬರೆಸಬೇಕು. ಉಪಜಾತಿಗಳನ್ನು ಅಗತ್ಯವಿದ್ದರೆ ಮಾತ್ರ ಬರೆಸಬೇಕು” ಎಂದು ಹೇಳಿದರು. “ನಮ್ಮ ಸಲಹೆ-ಸೂಚನೆಗಳನ್ನು ನೀಡಿದ್ದೇವೆ. ಅದನ್ನು ಕಾರ್ಯರೂಪಕ್ಕೆ ತರಬೇಕಾದ ಜವಾಬ್ದಾರಿ ರಾಜಕೀಯ ನಾಯಕರ ಮೇಲಿದೆ. ಆಗದಿದ್ದರೆ, ಅದರ ಆಕ್ಷನ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದರು.
ಒಂದು ವೇಳೆ ಕ್ರಿಶ್ಚಿಯನ್ ಒಕ್ಕಲಿಗ ಎಂದು ಉಲ್ಲೇಖ ಮಾಡಿದರೆ, ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್, ಸಿ.ಟಿ.ರವಿ ಎಚ್ಚರಿಕೆ ಕೊಟ್ಟರು. ಸರ್ಕಾರ ಬೆಂಕಿ ಹಚ್ಚಲು ಏನ್ ಮಾಡಬೇಕೋ ಅದನ್ನು ಮಾಡುತ್ತಿದೆ ಎಂದು ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಆರೋಪಿಸಿದರು.