ವಿಟ್ಲ ಠಾಣಾ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಬಳಿಯ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ರವಿವಾರ ಮಧ್ಯಾಹ್ನ ನಾಪತ್ತೆಯಾಗಿದ್ದು,
ಫೆ.23ರಂದು ಗುರುಕುಲದ ಗೋಶಾಲೆ ಮುಂಭಾಗದ ಕೆರೆಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗುವುದರೊಂದಿಗೆ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಂದಾಜಿಸಲಾಗಿದೆ.
ಮೂಲತ ಬೆಂಗಳೂರು ನಿವಾಸಿ, ಗುರುಕುಲದಲ್ಲಿ ಪ್ರಚಾರಕರಾಗಿರುವ ರಮೇಶ್ ಎಂಬುವರ ಪುತ್ರಿ ಗುರುಕುಲದ ಹತ್ತನೇ ತರಗತಿ ವಿದ್ಯಾರ್ಥಿನಿ ವೈಗ ಲಕ್ಷ್ಮೀ ರವಿವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದಳು.
ವೈಗ ಲಕ್ಷ್ಮೀ ಬಗ್ಗೆ ಸ್ಥಳೀಯರು, ಗುರುಕುಲದ ಸದಸ್ಯರು ಸೋಮವಾರ ಬೆಳಗ್ಗೆವರೆಗೂ ಸಾಕಷ್ಟು ಹುಡುಕಾಟ ನಡೆಸಿದ್ದರು. ಎಲ್ಲೂ ಸುಳಿವು ಸಿಕ್ಕಿರಲಿಲ್ಲ.
ಇದೀಗ ಗುರುಕುಲದ ಗೋಶಾಲೆ ಮುಂಭಾಗದ ಭಾರೀ ಆಳದ ಕೆರೆಯಲ್ಲಿ ವಿದ್ಯಾರ್ಥಿನಿ ವೈಗ ಲಕ್ಷ್ಮೀ ಅವರ ಮೃತದೇಹ ಕಂಡುಬಂದಿದೆ. ಗುರುಕುಲ ಗೋಶಾಲಾ ಮುಂಭಾಗದಲ್ಲಿರುವ ವಿಶಾಲ ಹಾಗೂ ಆಳವಾಗಿರುವ ಕೆರೆಗೆ ಸುರಕ್ಷತಾ ಆವರಣಗೋಡೆ ಇಲ್ಲದಿರುವುದರಿಂದ ವಿದ್ಯಾರ್ಥಿನಿ ಕಾಲು ಜಾರಿ ಬೀಳುವ ಸಾಧ್ಯತೆಯೂ ಇದೆ.
ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ, ಎಸೈ ಜಿ.ರಾಮಕೃಷ್ಣ, ಮತ್ತು ಸಿಬ್ಬಂದಿಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಮುರಳೀಧರ ವಿಟ್ಲ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದ ಕಾರ್ಯಕರ್ತರು ಕೆರೆಯಲ್ಲಿದ್ದ ವಿದ್ಯಾರ್ಥಿನಿಯ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ವಿದ್ಯಾರ್ಥಿನಿ ವೈಗ ಲಕ್ಷ್ಮೀ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಅಂದಾಜಿಸಲಾಗಿದೆ. ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ಪೊಲೀಸರ ತಂಡ ತನಿಖೆ ನಡೆಸುತ್ತಿದೆ.
























