ಪುತ್ತೂರು, ಜೂನ್ 29: ವಾಹನಕ್ಕೆ ಸೈಡ್ ನೀಡುವ ವಿಚಾರವಾಗಿ ಕಾರನ್ನು ರಸ್ತೆಯಲ್ಲಿ ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕತ್ತಿ ಹಾಗೂ ದೊಣ್ಣೆ ತೋರಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಇಬ್ಬರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು ಜಿಲ್ಲೆಯ ಕಲ್ನಾಡು ನಿವಾಸಿ ಪ್ರಸನ್ನ ಕುಮಾರ್ ಕೆ.ವಿ. ಅವರು ನೀಡಿದ ದೂರಿನಂತೆ, ಜೂನ್ 27ರಂದು ಸಂಜೆ ಕುಟುಂಬದೊಂದಿಗೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖ ಎಂಬಲ್ಲಿ ಹಿಂದಿನಿಂದ ಬಂದ ಪಿಕಪ್ ವಾಹನದ ಚಾಲಕ ಇಕ್ಕಟ್ಟಾದ ರಸ್ತೆಯಲ್ಲಿ ನಿರಂತರ ಹಾರನ್ ಹಾಕುತ್ತಾ ಓವರ್‌ಟೇಕ್ ಮಾಡಲು ಪ್ರಯತ್ನಿಸಿದ್ದಾನೆ.
ಈ ವೇಳೆ ನಿಧಾನವಾಗಿ ಸಾಗುವಂತೆ ತಿಳಿಸಿದಾಗ, ಪಿಕಪ್ ವಾಹನವನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಕಾರಿನ ದಾರಿಯನ್ನು ತಡೆದ ಆರೋಪವಿದೆ. ಬಳಿಕ ವಾಹನದಿಂದ ಇಳಿದ ಇಬ್ಬರು ಕತ್ತಿ ಹಾಗೂ ದೊಣ್ಣೆ ಹಿಡಿದು ಬಂದು ಮಲಯಾಳಂ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಪಿರ್ಯಾದಿದಾರ ಹಾಗೂ ಅವರ ಸಹೋದರ ಸುಜೀತ್ ಕಾರಿನಿಂದ ಇಳಿದಾಗ, ಪಿಕಪ್ ಚಾಲಕ ಸುಜೀತ್ ಅವರನ್ನು ಕೈಯಿಂದ ತಳ್ಳಿದ ಆರೋಪವೂ ಕೇಳಿಬಂದಿದೆ. ಸ್ಥಳೀಯ ಸಾರ್ವಜನಿಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಆರೋಪಿತರನ್ನು ಹನೀಫ್ ಹಾಗೂ ಮಹಮ್ಮದ್ ನಿಯಾಝ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 97/2026ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
























