ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ಮಂಗಳೂರು ನಗರದ ಕಂಕನಾಡಿಯಲ್ಲಿ ಭೀಕರ ದುರಂತ ಸಂಭವಿಸಿದೆ. ಇಲ್ಲಿನ ಹಳೆಯ ಹಂಚಿನ ಮನೆಯೊಂದರ ಮೇಲ್ಚಾವಣಿ ಹಾಗೂ ಗೋಡೆ ಬುಧವಾರ ಮುಂಜಾನೆ ದಿಢೀರನೆ ಕುಸಿದು ಬಿದ್ದ ಪರಿಣಾಮ, ಮನೆಯೊಳಗೆ ನಿದ್ದೆಯ ಮಂಪರಿನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಒಬ್ಬ ಮಹಿಳೆ ಹಾಗೂ ಇಬ್ಬರು ಬಾಲಕಿಯರು ಎಂದು ಗುರುತಿಸಲಾಗಿದೆ.
ಘಟನೆಯ ನಡೆದ ತಕ್ಷಣ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮೇಲ್ಚಾವಣಿಯ ಅವಶೇಷಗಳ ಅಡಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಒಬ್ಬ ಪುರುಷ ಹಾಗೂ ಇಬ್ಬರು ಬಾಲಕಿಯರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಮಂಗಳವಾರ ರಾತ್ರಿಯಿಂದ ತಡೆವಿಲ್ಲದೆ ಸುರಿದ ಭಾರಿ ಮಳೆಯಿಂದಾಗಿ ಹಳೆಯದಾಗಿದ್ದ ಮನೆಯ ಗೋಡೆಗಳು ಸಂಪೂರ್ಣವಾಗಿ ತೇವಗೊಂಡು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತಪಟ್ಟವರೆಲ್ಲ ಬಿಹಾರದವರು ಎಂಬುದು ತಿಳಿದುಬಂದಿದೆ. ಒಟ್ಟು ನಾಲ್ಕು ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸವಾಗಿದ್ದವು. ಈ ಪೈಕಿ ಒಂದು ಮನೆಯಲ್ಲಿ ಬಿಹಾರ ಮೂಲದ ಕುಟುಂಬ ವಾಸವಿತ್ತು. ಗಂಡ ಲಾಲ್ ಬಾಬು, ಪತ್ನಿ ಇಂದು, ಮಕ್ಕಳಾದ ಅನುಷಾ, ಅಲ್ಕಾ, ಅನಾಮಿಕ ಚೌರಾಸಿಯ, ಪರಿ ಜೊತೆ ವಾಸವಾಗಿದ್ದರು. ಈ ಪೈಕಿ ಅನಾಮಿಕ ಚೌರಾಸಿಯ(8), ಪರಿ (4) ಮೃತಪಟ್ಟಿದ್ದಾರೆ. ಲಾಲ್ ಬಾಬು ಹಾಗೂ ಪತ್ನಿ ಇಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೊಂದು ಮನೆಯಲ್ಲಿ ಬಾಲಕೃಷ್ಣ, ಶಾಂತಾ ದಂಪತಿ ವಾಸವಾಗಿದ್ದರು. ಇದರಲ್ಲಿ ಮಹಿಳೆ ಶಾಂತ (46) ಸಾವಿಗೀಡಾಗಿದ್ದಾರೆ. ಸದ್ಯ ಗಾಯಾಳುಗಳಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಘೋಷಣೆ ಮಾಡಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಲಿದೆ. ಮನೆ ಮಾಲೀಕರಿಗೆ ಪರಿಹಾರ ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಮಾಹಿತಿ ನೀಡಿದರು.
ಮನೆ ಮೇಲೆ ತಡೆಗೋಡೆ ಕುಸಿದು ಮೂವರು ಸಾವಿಗೀಡಾದ ವಿಚಾರ ತಿಳಿಯುತ್ತಿದ್ದಂತೆಯೇ ಸಚಿವ ಯುಟಿ ಖಾದರ್ ದೆಹಲಿ ಪ್ರವಾಸ ಮೊಟಕುಗೊಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ ಸಚಿವರು, ತ್ವರಿತ ಪರಿಹಾರ ಕ್ರಮಗಳಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೊನೆಗೂ ಮುಂಗಾರು ಮಳೆ ಚುರುಕುಗೊಂಡಿದ್ದು, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
























