ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ ಮೇಲಿನ ನಿರ್ಬಂಧ ತೆರವುಗೊಳಿಸಿದ ಬೆನ್ನಲ್ಲೇ ಕೇಂದ್ರ ಗುಡ್‌ನ್ಯೂಸ್ ನೀಡಿದೆ. ಇಂದಿನಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ದರ 183.50 ರೂ. ಇಳಿಕೆ ಮಾಡಿದೆ.
ಇಂದಿನಿಂದ (ಜುಲೈ 1) ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 183.50 ರೂ. ಇಳಿಕೆ ಮಾಡಲಾಗಿದೆ. ಈ ಮೂಲಕ 3,113.50 ರೂ. ಇದ್ದ ಸಿಲಿಂಡರ್ ಬೆಲೆ ಈಗ 2,930 ರೂ.ಗೆ ಇಳಿದಿದೆ. ಆದರೆ ತೈಲ ಕಂಪನಿಗಳು 14.2 ಕೆ.ಜಿ. ಗೃಹ ಬಳಕೆಯ LPG ಸಿಲಿಂಡರ್ ಬೆಲೆ ರೂ.942ರಲ್ಲೇ ಮುಂದುವರಿದಿದ್ದು, ಅದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇರಾನ್ ತನ್ನ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತಿದ್ದ ಕಚ್ಚಾ ತೈಲ ಮತ್ತು ಅನಿಲ ಸಾಗಣೆ ಹಡಗುಗಳ ಸಂಚಾರವನ್ನು ನಿರ್ಬಂಧಿಸಿತ್ತು. ಪರಿಣಾಮವಾಗಿ ವಿಶ್ವದಾದ್ಯಂತ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಪ್ರಪಂಚದಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದವು.
ದೇಶದಲ್ಲಿ ನಾಲ್ಕು ಹಂತಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಒಟ್ಟು ರೂ.1,374.50 ದರ ಏರಿಕೆಯಾಗಿತ್ತು. ಇದೀಗ ರೂ.183.50 ಇಳಿಕೆ ಮಾಡಲಾಗಿದ್ದರೂ, ಹಿಂದಿನ ಏರಿಕೆಗೆ ಹೋಲಿಸಿದರೆ ಬೆಲೆ ಇನ್ನೂ ಹೆಚ್ಚಿನ ಮಟ್ಟದಲ್ಲಿಯೇ ಇದೆ. ಗೃಹ ಬಳಕೆಯ 14.2 ಕೆ.ಜಿ. LPG ಸಿಲಿಂಡರ್ ಬೆಲೆ ಮಾರ್ಚ್‌ನಲ್ಲಿ ರೂ.60 ಹಾಗೂ ಜೂನ್‌ನಲ್ಲಿ ರೂ.29 ಹೆಚ್ಚಳ ಮಾಡಲಾಗಿದ್ದು, ಒಟ್ಟು ರೂ.89 ಏರಿಕೆಯಾಗಿತ್ತು.ವಾಣಿಜ್ಯ ಬಳಕೆದಾರರಿಗೆ ಮಾತ್ರ ಸದ್ಯಕ್ಕೆ ದರ ಇಳಿಕೆಯ ಲಾಭ ದೊರೆತಿದ್ದು, ಗೃಹ ಬಳಕೆದಾರರು ಮುಂದಿನ ದರ ಪರಿಷ್ಕರಣೆಯವರೆಗೆ ಕಾಯಬೇಕಾಗಿದೆ























