ಪುತ್ತೂರು: ಪುತ್ತೂರು-ಉಪ್ಪಿನಂಗಡಿಯ ರಸ್ತೆಯ ಹಾರಾಡಿ ರೈಲ್ವೇ ಅಂಡರ್ ಪಾಸ್ ನಲ್ಲಿ ಕಾಂಕ್ರಿಟೀಕರಣ ಕಾಮಗಾರಿ ಮುಕ್ತಾಯಗೊಂಡಿದ್ದು ಸೋಮವಾರ(ಜು.20)ರಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಹಾರಾಡಿಯಲ್ಲಿ ರೈಲ್ವೆ ಅಂಡರ್ ಪಾಸ್ ನಲ್ಲಿ ನಡೆಯುತ್ತಿರುವ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಜು.18ರಂದು ವೀಕ್ಷಿಸಿದ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಹಾರಾಡಿಯ ರೈಲೆ ಅಂಡರ್ ಪಾಸ್ ಕೆಳಗಡೆಯ ರಸ್ತೆ ತೀರಾ ಕೆಟ್ಟುಹೋಗಿತ್ತು. ಜನರು ಪ್ರತಿ ವರ್ಷ ಸಂಕಷ್ಟ ಎದುರಿಸುತ್ತಿದ್ದರು. ಈಗ ಅದಕ್ಕೆ ಮುಕ್ತಿ ಪಡೆಯುವ ಸಮಯ ಬಂದಿದ್ದು ಸೋಮವಾರ ಬೆಳಿಗ್ಗೆಯಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಮುಂದಿನ ಸೋಮವಾರದಿಂದ ಘನ ವಾಹನ ಸೇರಿದಂತೆ ಎಲ್ಲಾ ತರಹದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಬಾಕಿ ಉಳಿದ ಕಾಮಗಾರಿಗಳನ್ನು ಜನರಿಗೆ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಕಾಮಗಾರಿ ನಡೆಸಲಾಗುವುದು. ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕರು ಹೇಳಿದರು.
ಲೋಕೋಪಯೋಗಿ ಇಲಾಖೆ ,ಮೆಸ್ಕಾಂ,ರೈಲ್ವೇ ಇಲಾಖೆ,ಬಹುಗ್ರಾಮ ಕುಡಿಯುವ ನೀರು ಯೋಜನೆ ಇಲಾಖಾ ಪ್ರಮುಖರು ಇದ್ದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ರೈ, ಸಹಾಯಕ ಇಂಜಿನಿಯರ್ ಎಲ್.ಸಿ ಸಿಕ್ವೇರಾ, ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ., ಸಹಾಯಕ ಇಂಜಿನಿಯರ್ ರಾಜೇಶ್, ರೈಲ್ವೇ,ಜಲಸಿರಿ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
























