ಪ್ರಧಾನ ಮಂತ್ರಿಗಳಿಗೆ ಆರ್ಥಿಕ ಸಲಹೆ ನೀಡುವ ಮಂಡಳಿ ಸಿದ್ದಪಡಿಸಿರುವ ವರದಿಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ವಾಟ್ಸಪ್ ವಿಶ್ವ ವಿದ್ಯಾಲಯದ ವರದಿ ಎಂದು ಲೇವಡಿ ಮಾಡಿದ್ದಾರೆ. ಭಾರತದಲ್ಲಿ ವರದಿ ಪ್ರಕಾರ ಹಿಂದೂಗಳ ಜನಸಂಖ್ಯೆಯಲ್ಲಿ ಕುಸಿತವಾಗಿದೆ. ಆದರೆ, ಈ ವರದಿ ಕುರಿತು ಕೇಳಿದ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿದ ಅಸಾದುದ್ದೀನ್ ಓವೈಸಿ, ಈ ವರದಿಯನ್ನು ಮಾಡಿದ್ದು ಯಾರು? ವಾಟ್ಸಪ್ ವಿಶ್ವ ವಿದ್ಯಾಲಯ ತಯಾರಿಸಿದ ವರದಿಯೇ? ಈ ವರದಿಯನ್ನು ನನಗೆ ಕಳಿಸಿ, ನಾನು ಅಧ್ಯಯನ ಮಾಡಿ ನಿಮಗೆ ಉತ್ತರಿಸುತ್ತೇನೆ ಎಂದು ಓವೈಸಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಅವರಿಗೆ ಆರ್ಥಿಕ ವಿಚಾರಗಳ ಕುರಿತಾಗಿ ಸಲಹೆ ನೀಡುವ ಮಂಡಳಿಗೆ ಇಎಸಿ – ಪಿಎಂ ಎಂದು ಕರೆಯಲಾಗುತ್ತದೆ. ಈ ಮಂಡಳಿಯು 1950 ರಿಂದ 2015ರ ಅವಧಿಯಲ್ಲಿ ಭಾರತದಲ್ಲಿ ಹಿಂದೂಗಳ ಒಟ್ಟಾರೆ ಜನಸಂಖ್ಯೆ ಶೇ. 7.82 ರಷ್ಟು ಕುಸಿತ ಆಗಿದೆ ಎಂದು ವರದಿ ನೀಡಿದೆ. 1950 ರಲ್ಲಿ ದೇಶದ ಒಟ್ಟು ಜನಸಂಖ್ಯೆ ಪೈಕಿ ಶೇ. 84.68 ರಷ್ಟಿದ್ದ ಹಿಂದೂಗಳ ಜನಸಂಖ್ಯೆ 2015ರಲ್ಲಿ ಶೇ. 78.06ಕ್ಕೆ ಕುಸಿತ ಕಂಡಿದೆ ಎಂದು ವರದಿ ಹೇಳಿದೆ. ಇದೇ ವೇಳೆ ಮುಸ್ಲಿಮರ ಜನಸಂಖ್ಯೆ 1950 ರಲ್ಲಿ ದೇಶದ ಒಟ್ಟು ಜನಸಂಖ್ಯೆ ಪೈಕಿ ಶೇ. 9.84ರಷ್ಟಿತ್ತು. ಆದರೆ, 2015ರಲ್ಲಿ 14.09ಕ್ಕೆ ಏರಿಕೆ ಕಂಡಿದೆ ಎಂದು ವರದಿ ಹೇಳಿದೆ. ಈ ಪ್ರಕಾರವಾಗಿ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇ. 43.15ರಷ್ಟು ಏರಿಕೆ ದಾಖಲಾಗಿದೆ.
ತಮ್ಮ ಪರಿಶೀಲಿಸಿದ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಪ್ರಕಟಿಸಿದ್ದ ಅಮಿತ್ ಮಾಳವೀಯ, ಹಿಂದೂಗಳ ಜನಸಂಖ್ಯೆ 1950ರಿಂದ 2015ರ ನಡುವೆ ಶೇ. 7.8ರಷ್ಟು ಕುಸಿತ ಕಂಡಿದೆ. ಇದೇ ವೇಳೆ ಮುಸ್ಲಿಮರ ಜನಸಂಖ್ಯೆ ಶೇ. 43ರಷ್ಟು ಏರಿಕೆ ಕಂಡಿದೆ. ದಶಕಗಳ ಕಾಲ ಇದ್ದ ಕಾಂಗ್ರೆಸ್ ಆಡಳಿತದಲ್ಲಿ ಈ ರೀತಿ ಆಗಿದೆ. ಇವರನ್ನು ಹೀಗೆಯೇ ಬಿಟ್ಟರೆ ಹಿಂದೂಗಳಿಗೆ ನೆಲೆಯೇ ಇಲ್ಲದಂತೆ ಆಗುತ್ತೆ ಎಂದು ಅಮಿತ್ ಮಾಳವೀಯ ಆಕ್ರೋಶ ಹೊರ ಹಾಕಿದ್ದರು.
ಉತ್ತರ ಪ್ರದೇಶದ ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಕೂಡಾ ಈ ವರದಿ ವಿಚಾರವಾಗಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಓಲೈಕೆ ರಾಜಕಾರಣದಿಂದಾಗಿಯೇ ಈ ಸನ್ನಿವೇಶ ಸೃಷ್ಟಿಯಾಗಿದೆ ಎಂದಿರುವ ಅವರು, ಜನಸಂಖ್ಯಾ ವೃದ್ದಿಯಲ್ಲಿ ಆಗಿರುವ ಈ ಅಸಮತೋಲನಕ್ಕೆ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ.