ಮಂಗಳೂರು: ಬಂಟ್ವಾಳದ ಕೊಳತ್ತಮಜಲು ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಪೊಲೀಸ್ ಕ್ರಮದ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಕ್ರೋಶ ವ್ಯಕ್ತಪಡಿಸಿದ್ದು, ಇದರ ಹಿಂದೆ ವ್ಯವಸ್ಥಿತ ಸಂಚು ಇದೆ ಎಂದು ಆರೋಪಿಸಿದೆ. ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್, ಕಾಂಗ್ರೆಸ್ ಸರ್ಕಾರ ರಾಜಕೀಯ ಪ್ರೇರಿತವಾಗಿ ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದರೆ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಹಾಗೂ ‘ಎಸ್ಪಿ ಕಚೇರಿ ಚಲೋ’ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದೇ ಪ್ರಕರಣದಲ್ಲಿ ಎಲ್ಲಾ ಆರೋಪಿಗಳ ವಿರುದ್ಧ KCOCA ಜಾರಿಯಾಗಿದ್ದು, ಭರತ್ ಕುಮ್ಡೇಲು ಸೇರಿದಂತೆ ಆರು ಮಂದಿಯ ವಿರುದ್ಧ ಗೂಂಡಾ ಕಾಯ್ದೆಯನ್ನೂ ಜಾರಿಗೊಳಿಸಲಾಗಿದೆ ಎಂದು ದಕ್ಷಿಣ ಕನ್ನಡ ಪೊಲೀಸರು ತಿಳಿಸಿದ್ದಾರೆ.
























